ಛತ್ತೀಸ್ಗಡ-ತೆಲಂಗಾಣ ಗಡಿಯಲ್ಲಿ ಎನ್ಕೌಂಟರ್ ಗೆ ಆರು ಮಂದಿ ನಕ್ಸಲರ ಬಲಿ

ಸಾಂದರ್ಭಿಕ ಚಿತ್ರ:PTI
ಹೈದರಾಬಾದ್,ಡಿ.27: ಛತ್ತೀಸ್ಗಡದ ಸುಕ್ಮಾ ಜಿಲ್ಲೆ ಮತ್ತು ತೆಲಂಗಾಣದ ಭದ್ರಾದ್ರಿ ಕೋಥಗುಡೆಮ್ ಜಿಲ್ಲೆ ನಡುವಿನ ಗಡಿಯಲ್ಲಿಯ ಪೇಸಲಪಡು ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ ಆರು ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತೆಲಂಗಾಣದ ಗ್ರೇಹೌಂಡ್ಸ್ ಪಡೆಗಳು ಹಾಗೂ ಛತ್ತೀಸ್ಗಡದ ಡಿಆರ್ಐ ಮತ್ತು ಸಿಆರ್ಪಿಎಫ್ ಪಡೆಗಳು ಈ ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದವು.
ಹತ ನಕ್ಸಲರನ್ನು ಇನ್ನಷ್ಟೇ ಗುರುತಿಸಬೇಕಿದೆ,ಆದರೆ ಅವರು ಚೆರ್ಲಾ ಪ್ರದೇಶ ಸಮಿತಿ ಸದಸ್ಯರು ಎಂದು ಶಂಕಿಸಲಾಗಿದೆ ಮತ್ತು ಮೃತರಲ್ಲಿ ಹಿರಿಯ ನಾಯಕನೋರ್ವನೂ ಸೇರಿರಬಹುದು ಎಂದು ಪೊಲೀಸರು ತಿಳಿಸಿದರು.
ಪೇಸಲಪಡು ಪ್ರದೇಶದಲ್ಲಿ ನಕ್ಸಲರ ಗುಂಪೊಂದು ಬೀಡು ಬಿಟ್ಟಿದೆ ಮತ್ತು ಅವರು ಸುಧಾರಿತ ಸ್ಫೋಟಕ ಸಾಧನಗಳನ್ನು ತಯಾರಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಜಂಟಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಬೆಳಿಗ್ಗೆ 6:30ರಿಂದ 7 ಗಂಟೆಯ ನಡುವೆ ನಕ್ಸಲರ ಗುಂಪಿನೊಂದಿಗೆ ಗುಂಡಿನ ಚಕಮಕಿ ನಡೆದಿದ್ದು,ಕನಿಷ್ಠ ಆರು ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ ಎಂದು ಭದ್ರಾದ್ರಿ ಕೋಥಗುಡೆಮ್ ಎಸ್ಪಿ ಸುನಿಲ್ ದತ್ತ ತಿಳಿಸಿದರು.





