ಬೆಂಗಳೂರು: ಡಾಬಾಗೆ ಬೆಂಕಿ; ಓರ್ವ ಗಂಭೀರ
ಬೆಂಗಳೂರು: ಹೆಸರಘಟ್ಟ ರಸ್ತೆಯ ದೊಡ್ಡಬ್ಯಾಲಕೆರೆಯ ಬಳಿಯ ಡಾಬಾವೊಂದರ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ನಡೆಸಿದ ದಾಳಿಯಿಂದ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಕಿಯಿಂದ ಸುಟ್ಟು ಗಾಯಗೊಂಡ ಡಾಬಾ ಸಿಬ್ಬಂದಿ ಹಾಸನ ಮೂಲದ ಮನೋಜ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಡಿ24ರಂದು ರಾತ್ರಿ 10.30ಕ್ಕೆ ದೊಡ್ಡಬ್ಯಾಲಕೆರೆಯ ಬಳಿಯ ಡಾಬಾ ಬಾಗಿಲು ಹಾಕಿ ಬಂದ್ ಮಾಡಿದ್ದರು. ತಡರಾತ್ರಿ 12.30 ರ ವೇಳೆ ಹೊರಗಡೆಯಿಂದ ಜೋರಾಗಿ ಶಬ್ದ ಕೇಳಿಸಿದೆ. ಶಾರ್ಟ್ ಸರ್ಕ್ಯೂಟ್ ಆಗಿರಬಹುದುದೆಂದು ತಿಳಿದು ಹೊರಗಡೆ ಸಿಬ್ಬಂದಿ ಬಂದಾಗ ಬೆಂಕಿ ಹತ್ತಿಕೊಂಡಿದೆ. ನಂತರ ಬಾಗಿಲನ್ನು ತೆರೆದಾಗ ವ್ಯಕ್ತಿಯೊಬ್ಬ ಏಕಾಏಕಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಬೆಂಕಿಯಿಂದ ಡಾಬಾದ ಒಂದು ಭಾಗ ಸುಟ್ಟು ಕರಕಲಾಗಿದ್ದು ಮಲಗಿದ್ದ ಡಾಬಾ ಸಿಬ್ಬಂದಿ ಹಾಸನ ಮೂಲದ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.





