ಪಂದ್ಯಶ್ರೇಷ್ಠ ನಗದನ್ನು ಮೈದಾನ ನಿರ್ವಾಹಕನಿಗೆ ನೀಡಿದ ಸೂರ್ಯಕುಮಾರ್ ಯಾದವ್

photo:Instagram/@surya_14kumar
ಮುಂಬೈ, ಡಿ. 27: ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಸ್ಥಳೀಯ ಕ್ರಿಕೆಟ್ ಕ್ರೀಡಾಕೂಟ ಪೊಲೀಸ್ ಶೀಲ್ಡ್ನಲ್ಲಿ ಗೆದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ಥಳೀಯ ಮೈದಾನ ನಿರ್ವಾಹಕನಿಗೆ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಪೊಲೀಸ್ ಶೀಲ್ಡ್ ಕ್ರೀಡಾಕೂಟದ ಮೂರು ದಿನಗಳ ಫೈನಲ್ನಲ್ಲಿ ಯಾದವ್ ತನ್ನ ಕ್ಲಬ್ ಪಾರ್ಸೀ ಜಿಂಖಾನದ ಪರವಾಗಿ ಪಯ್ಯಡೆ ಸ್ಪೋರ್ಟ್ಸ್ಕ್ಲಬ್ ವಿರುದ್ಧ ಆಡಿದರು. ಮುಂಬೈಯ ಪೊಲೀಸ್ ಜಿಂಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಯಾದವ್ 152 ಎಸೆತಗಳಲ್ಲಿ 259 ರನ್ ಗಳಿಸಿದರು.
ಪಂದ್ಯದ ಬಳಿಕ, ಮೈದಾನ ಸಿಬ್ಬಂದಿಯ ದೇಣಿಗೆಯನ್ನು ಯಾವ ರೀತಿಯಲ್ಲಿ ಮರೆತುಬಿಡಲಾಗುತ್ತದೆ ಎಂಬ ಬಗ್ಗೆ ಅವರು ಮಾತನಾಡಿದರು. ‘‘ಕ್ರಿಕೆಟಿಗರಾಗಿ ನಾವು ಈ ವಿಷಯದಲ್ಲಿ ನಿರ್ಲಕ್ಷ ವಹಿಸುತ್ತೇವೆ ಎಂದು ನನಗನಿಸುತ್ತದೆ’’ ಎಂದು ಅವರು ಹೇಳಿದರು.
‘‘ಮೈದಾನ ಸಿಬ್ಬಂದಿಯ ಪ್ರಯತ್ನಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮೊದಲಿಗೆ ಮೈದಾನದಲ್ಲಿ ಇರುವವರು ಅವರು. ಬೆಳಗ್ಗೆ 6:30ಕ್ಕೇ ಅವರು ಮೈದಾನದಲ್ಲಿರುತ್ತಾರೆ. ಅವರು ಪಿಚ್ ನಿರ್ಮಿಸುತ್ತಾರೆ, ಇಬ್ಬನಿಯನ್ನು ತೆರವುಗೊಳಿಸುತ್ತಾರೆ. ಈ ವಿಷಯಗಳು ನನ್ನ ಹೃದಯಕ್ಕೆ ಹತ್ತಿರವಾಗಿವೆ. ಯಾಕೆಂದರೆ ನಾನು ಕ್ರಿಕೆಟ್ ಆಡಲು ಆರಂಭಿಸಿದ ದಿನಗಳಲ್ಲಿ, ನೆಟ್ಸ್ ನಲ್ಲಿ ಬ್ಯಾಟಿಂಗ್ ಮಾಡುವಾಗಲೆಲ್ಲ ಮೈದಾನ ಸಿಬ್ಬಂದಿ ಮತ್ತು ನನ್ನ ಕೆಲವು ಸ್ನೇಹಿತರೊಂದಿಗೆ ಪಿಚ್ ಮೇಲೆ ರೋಲರ್ ಎಳೆಯುತ್ತಿದ್ದೆ’’ ಎಂದರು.