ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪ: ಕೇಸ್ ರದ್ದತಿಗೆ ಹೈಕೋರ್ಟ್ ನಕಾರ
ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ

ಬೆಂಗಳೂರು: ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಎನ್ನಲಾಗಿರುವ ಅಬ್ದುಲ್ ನಾಸೀರ್ ಮದನಿ ವಿರುದ್ಧ ಸಾಕ್ಷ್ಯ ಹೇಳದಂತೆ ಬೆದರಿಕೆಯೊಡ್ಡಿದ್ದ ಆರೋಪದ ಮೇಲೆ ಕೇರಳದ ಪತ್ರಕರ್ತೆ ಕೆ. ಕೆ. ಶಹೀನಾ ಮತ್ತಿತರ ಮೂವರನ್ನು ಪ್ರಕರಣದಿಂದ ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ.
ಮಡಿಕೇರಿಯ ಜಿಲ್ಲಾ ಕೋರ್ಟ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆ. ಕೆ. ಶಹೀನಾ, ಸುಬೇರ ಪಡುಪು ಮತ್ತು ಮಡಿಕೇರಿ ಮೂಲದ ಉಮರ್ ಮೌಲ್ವಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎನ್. ಕೆ. ಸುದೀಂಧ್ರ ರಾವ್ ಅವರಿದ್ದ ಏಕಸದಸ್ಯ ಪೀಠ, ಈ ತೀರ್ಪು ನೀಡಿದೆ.
ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ, ಅರ್ಜಿದಾರರು ತಾವು ಎತ್ತಿರುವ ಅಂಶಗಳಿಗೆ ಸೂಕ್ತ ಪುರಾವೆಯನ್ನು ಒದಗಿಸಿಲ್ಲ. ಅಲ್ಲದೆ, ಅರ್ಜಿದಾರರು ತಾವು ನಿರಪರಾಧಿಗಳೆಂದು ಸಾಬೀತುಪಡಿಸಲು ವಿಚಾರಣಾ ನ್ಯಾಯಾಲಯದಲ್ಲಿ ಅವಕಾಶವಿದ್ದು, ಅಲ್ಲಿ ಅವರು ತಮ್ಮ ವಾದ, ಸಾಕ್ಷ್ಯಗಳನ್ನು ಮಂಡಿಸಬಹುದು ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಯುಎಪಿಎ ಅಡಿ ಹೂಡಿದ್ದ ಆರೋಪ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.
ಸಕ್ಷಮ ಪ್ರಾಧಿಕಾರ ಆರೋಪಿಗಳ ವಿರುದ್ಧ ಕಠಿಣ ಯುಎಪಿಎ ಹೇರಲು ವಿವೇಚನೆ ಬಳಸಿಲ್ಲವೆಂದು ಈ ಹಂತದಲ್ಲಿಯೇ ಹೇಳಲಾಗದು. ಜೊತೆಗೆ ಆರೋಪವನ್ನು ಪುಷ್ಠೀಕರಿಸುವ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ಒದಗಿಸಿದೆ. ಹೀಗಾಗಿ, ಅಧೀನ ನ್ಯಾಯಾಲಯ ನೀಡಿರುವ ಆದೇಶ ಸರಿ ಇದೆ. ಅದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು: ತಾನು ತೆಹಲ್ಕಾ ಪತ್ರಕರ್ತೆ ಎಂದು ಹೇಳಿಕೊಂಡು ಕೆ. ಕೆ. ಶಹೀನಾ ಮತ್ತಿತರ ಮೂವರು ಮಡಿಕೇರಿಯಲ್ಲಿ ಯೋಗಾನಂದ್ ಮತ್ತು ಕೆ. ಬಿ. ರಫೀಕ್ ಅವರನ್ನು ಭೇಟಿ ಮಾಡಿ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ವಿಚಾರಿಸಿದ್ದಲ್ಲದೆ, ಕೇರಳದ ಪಿಡಿಪಿ ಸಂಘಟನೆಯ ಮುಖಂಡ ಹಾಗೂ ಪ್ರಕರಣದಲ್ಲಿ ಬಂಧಿತನಾಗಿರುವ ಅಬ್ದುಲ್ ನಾಸೀರ್ ಮದನಿ ವಿರುದ್ಧ ಸಾಕ್ಷ್ಯ ಹೇಳಬಾರದು, ಹೇಳಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಾಣ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು.
ಆ ಕುರಿತು ನೀಡಿದ್ದ ದೂರು ದಾಖಲಿಸಿಕೊಂಡಿದ್ದ ಸೋಮವಾರಪೇಟೆ ಮತ್ತು ಸಿದ್ಧಾಪುರ ಠಾಣಾ ಪೊಲೀಸರು ಈ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಕಲಂ 34, 120ಬಿ ಮತ್ತು 506 ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967 ಸೆಕ್ಷನ್ 22ರಡಿ ಪ್ರಕರಣ ದಾಖಲಿಸಿದ್ದರು. ಮತ್ತು ಯುಎಪಿಎ ಕಾಯಿದೆಯಡಿ ಆರೋಪ ಹೊರಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದಿದ್ದರು. ಹೀಗಾಗಿ, ಆರೋಪಿಗಳು ತಮ್ಮನ್ನು ಈ ಆರೋಪದಿಂದ ಕೈಬಿಡುವಂತೆ ಕೋರಿದ್ದ ಅರ್ಜಿಯಲ್ಲಿ ಮಡಿಕೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿತ್ತು. ಅವರು ಅದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.







