ಬೆಳಗಾವಿ: ಯೋಧನ ಮೃತದೇಹ ಪತ್ತೆ; ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು
ಬೆಳಗಾವಿ, ಡಿ.27: ಸಹೋದರಿಯ ಪುತ್ರನ ಮದುವೆಗೆಂದು ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧನನ್ನು ಕೊಲೆಗೈದಿರುವ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳಿಂದ ಕಣ್ಮರೆಯಾಗಿದ್ದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೂರ ಗ್ರಾಮದ ಯೋಧ ಈರಪ್ಪ ಪೂಜಾರ(37) ಅವರ ಮೃತದೇಹ ಅದೇ ಗ್ರಾಮದ ಪಾಳು ಬಿದ್ದ ಬಾವಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಡಿ.2ರಂದು ಅಕ್ಕನ ಪುತ್ರನ ಮದುವೆಗಾಗಿ ಯೋಧ ರಜೆಗೆ ಬಂದಿದ್ದರು. ಮದುವೆಯ ಆಹ್ವಾನ ಪತ್ರಿಕೆ ನೀಡಲು ಯೋಧ ಈರಪ್ಪ ಡಿ.25ರಂದು ಮನೆಯಿಂದಹೋಗಿದ್ದರು. ಎರಡು ದಿನಗಳಾದರೂ ಮನೆಗೆ ಬಾರದಿರುವುದಕ್ಕೆ ಹುಡುಕಾಟ ನಡೆಸಿದ್ದ ಕುಟುಂಬಸ್ಥರು, ಬಳಿಕ ಮುನವಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆದರೆ, ಸೋಮವಾರ ಗ್ರಾಮದ ಹೊರ ವಲಯದಲ್ಲಿ ಬಾವಿಯಲ್ಲಿ ಶವ ಪತ್ತೆಯಾಗಿದೆ. ತಲೆಗೆ ಬಲವಾಗಿ ಹೊಡೆಯಲಾಗಿದ್ದು, ಕೊಲೆ ಮಾಡಿರುವ ಅನುಮಾನವನ್ನು ಕುಟುಂಬಸ್ಥರು ಹೊರ ಹಾಕಿದ್ದಾರೆ.
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದೆ. ಕೊಲೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಮುನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







