ಪ್ರಧಾನಿ ಮೋದಿಗೆ 12 ಕೋಟಿಯ ಕಾರು: ವಿಶೇಷತೆಗಳೇನು ಗೊತ್ತೇ ?

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಕಾರು ಇದೀಗ ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್‌ನಿಂದ ಮೇಲ್ದರ್ಜೆಗೇರಿದ್ದು, ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಶಸ್ತ್ರಸಜ್ಜಿತ ಮರ್ಸಿಡೆಸ್-ಮೆಬ್ಯಾಚ್ ಎಸ್-650 ಕಾರು ಹೊಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಅವರನ್ನು ಹೈದರಾಬಾದ್ ಹೌಸ್‌ನಲ್ಲಿ ಭೇಟಿ ಮಾಡುವ ವೇಳೆ ತಮ್ಮ ಹೊಸ ಮೆಬಾಚ್ 650ಯಲ್ಲಿ ಆಗಮಿಸಿ ಗಮನ ಸೆಳೆದಿದ್ದರು. ಇತ್ತೀಚೆಗೆ ಮತ್ತೊಮ್ಮೆ ಈ ವಾಹನ ಪ್ರಧಾನಿಯವರ ಬೆಂಗಾವಲು ವಾಹನವಾಗಿ ಕಾಣಿಸಿಕೊಂಡಿತ್ತು.
ಈ ಅತ್ಯಾಧುನಿಕ ವಾಹನದಲ್ಲಿ ವಿನೂತನ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕಾರುಗಳಲ್ಲೇ ಗರಿಷ್ಠ ಸುರಕ್ಷತೆ ಎನಿಸಿದ ವಿಆರ್10 ಮಟ್ಟದ ಸುರಕ್ಷತೆಯನ್ನು ಇದು ಹೊಂದಿರುತ್ತದೆ. ಮರ್ಸಿಡೆಸ್-ಮೆಬ್ಯಾಚ್ ಎಸ್ 600 ಗಾರ್ಡ್ ಕಾರನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಬೆಲೆ 10.5 ಕೋಟಿ ರೂಪಾಯಿ ಹಾಗೂ ಎಸ್ 650 ಬೆಲೆ 12 ಕೋಟಿ ರೂಪಾಯಿಗಿಂತ ಅಧಿಕ ಇರಲಿದೆ ಎಂದು ಅಂದಾಜಿಸಲಾಗಿದೆ.
ದೇಶದ ಮುಖ್ಯಸ್ಥರನ್ನು ರಕ್ಷಿಸುವ ಹೊಣೆ ಹೊಂದಿರುವ ಎಸ್‌ಪಿಜಿ ಸಾಮಾನ್ಯವಾಗಿ ಹೊಸ ಕಾರಿಗೆ ಮನವಿ ಸಲ್ಲಿಸುತ್ತದೆ. ಭದ್ರತಾ ಅಗತ್ಯತೆಗಳನ್ನು ಗುರುತಿಸಿ, ತಾವು ರಕ್ಷಿಸಬೇಕಾದ ವ್ಯಕ್ತಿಗೆ ಹೊಸ ವಾಹನ ಅಗತ್ಯವಿದೆಯೇ ಎಂದು ನಿರ್ಧರಿಸುತ್ತದೆ.
ಈ ಅತ್ಯಾಧುನಿಕ ವಾಹನ 60 ಲೀಟರ್ ಟ್ವಿನ್ ಟರ್ಬೊ ವಿ 12 ಎಂಜಿನ್‌ಗಳನ್ನು ಹೊಂದಿದ್ದು, ಇದು 516 ಬಿಎಚ್‌ಪಿ ಮತ್ತು 900 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸಬಲ್ಲದು. ಗರಿಷ್ಠ ವೇಗದ ಮಿತಿ ಗಂಟೆಗೆ 160 ಕಿಲೋಮೀಟರ್‌ಗಳು. ಎಸ್ 650 ಬಾಡಿ ಮತ್ತು ಇದರ ಕಿಟಕಿಗಳು ಉಕ್ಕಿನ ಗುಂಡುಗಳನ್ನು ಕೂಡಾ ತಡೆದುಕೊಳ್ಳಬಲ್ಲವು. ಇದು 2010 ಸ್ಫೋಟ ನಿರೋಧಕ ವಾಹನ (ಇಆರ್‌ವಿ) ರೇಟಿಂಗ್ ಹೊಂದಿದ್ದು, 2 ಮೀಟರ್ ದೂರದಿಂದ ಮಾಡುವ 15 ಕೆಜಿ ಟಿಎನ್‌ಟಿ ಸ್ಫೋಟದಿಂದ ವಾಹನದಲ್ಲಿರುವುದನ್ನು ರಕ್ಷಿಸಬಹುದಾಗಿದೆ. ಗಾಜಿನ ಒಳಾಂಗಣಕ್ಕೆ ಪಾಲಿಕಾರ್ಬೊನೇಟ್ ಲೇಪನವಿದ್ದು, ನೇರ ಸ್ಫೋಟದಿಂದ ಈ ವಾಹನದ ಪ್ರಯಾಣಿಕರನ್ನು ರಕ್ಷಿಸಲು ಭಾರಿ ಶಸ್ತ್ರಾಸ್ತ್ರಗಳನ್ನು ಕೆಳಭಾಗದಲ್ಲಿ ಹೊಂದಿರುತ್ತದೆ. ಅನಿಲ ದಾಳಿಯ ಸಂದರ್ಭದಲ್ಲಿ ಇದರ ಕ್ಯಾಬಿನ್ ಪ್ರತ್ಯೇಕ ಗಾಳಿ ಪೂರೈಕೆಯನ್ನು ಪಡೆಯುತ್ತದೆ.
ವಾಹನಕ್ಕೆ ವಿಶೇಷ ವಸ್ತುವಿನ ಲೇಪನವಿದ್ದು, ಢಿಕ್ಕಿ ಹೊಡೆದ ಸಂದರ್ಭದಲ್ಲಿ ರಂಧ್ರ ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತದೆ. ಬೋಯಿಂಗ್ ಕಂಪನಿ ತನ್ನ ಎಎಚ್-64 ಅಪಾಚೆ ಟ್ಯಾಂಕ್ ದಾಳಿಯ ಹೆಲಿಕಾಪ್ಟರ್‌ಗಳಿಗೆ ಬಳಸುವ ವಸ್ತುಗಳನ್ನೇ ಇದಕ್ಕೆ ಬಳಸಲಾಗುತ್ತದೆ.







