ಹೊಸ ವರ್ಷ ಆಚರಣೆಗೆ ನಿರ್ಬಂಧ : ರಾಜ್ಯದ ಆತಿಥ್ಯ ಉದ್ಯಮಕ್ಕೆ ಭಾರಿ ಹೊಡೆತ

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್-19 ನಿರ್ಬಂಧಗಳನ್ನು ಡಿಸೆಂಬರ್ 31 ಮತ್ತು ಜನವರಿ 1ರಂದು ರಾಜ್ಯ ಸರ್ಕಾರ ಹೇರಿರುವ ಹಿನ್ನೆಲೆಯಲ್ಲಿ ರಾಜ್ಯದ ಆತಿಥ್ಯ ಉದ್ಯಮ ಸುಮಾರು 500 ಕೋಟಿ ರೂಪಾಯಿಗಳ ಭಾರಿ ನಷ್ಟ ಅನುಭವಿಸಲಿದೆ.
ಡಿಸೆಂಬರ್ 28ರಿಂದ ಜಾರಿಯಾಗುವಂತೆ ಮುಂದಿನ 10 ದಿನಗಳ ಕಾಲ ರಾಜ್ಯದಲ್ಲಿ ರಾತ್ರಿ 10 ರಿಂದ ಮುಂಜಾನೆ 5 ಗಂಟೆಯವರೆಗೆ ಕರ್ಫ್ಯೂ ವಿಧಿಸಲಾಗುತ್ತಿದೆ. ಈ ಅವಧಿಯಲ್ಲಿ ಹೋಟೆಲ್, ಪಬ್ ಮತ್ತು ರೆಸ್ಟೋರೆಂಟ್ಗಳು ಶೇಕಡ 50ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿದೆ. ಇದರಿಂದಾಗಿ 60 ತಾರಾ ಹೋಟೆಲ್ಗಳು ಮತ್ತು ನೂರಾರು ಕ್ಲಬ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ಗಳನ್ನು ಹೊಂದಿರುವ ಬೆಂಗಳೂರು ಇತರ ಎಲ್ಲ ಜಿಲ್ಲೆಗಳಿಗಿಂತ ಅಧಿಕ ನಷ್ಟ ಅನುಭವಿಸಬೇಕಾಗುತ್ತದೆ.
"ನಗರ ಹಾಗೂ ಸುತ್ತಮುತ್ತಲಿನ ಬಹುತೇಕ ರೆಸಾರ್ಟ್ಗಳು ಪೂರ್ಣ ಕಾಯ್ದಿರಿಸಲ್ಪಟ್ಟಿವೆ. ಇದೀಗ ಸರ್ಕಾರ ಹೊಸ ನಿಯಮಾವಳಿ ಜಾರಿಗೊಳಿಸಿದೆ. ಮಾರ್ಗಸೂಚಿ ಬಿಡುಗಡೆ ಮಾಡುವಂತೆ ನಾವು ಕಳೆದ ಮೂರು ವಾರಗಳಿಂದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆವು. ಆದರೆ ತೀರಾ ತಡವಾಗಿ ಆದೇಶ ಬಂದಿದೆ. ಈ ಮಾರ್ಗಸೂಚಿ ಬಿಡುಗಡೆ ಮಾಡುವ ವೇಳೆ ಉದ್ಯಮದ ಯಾರ ಜತೆಗೂ ಚರ್ಚಿಸಿಲ್ಲ. ಈ ಅಧಿಸೂಚನೆ ಬಗ್ಗೆ ಅತೀವ ಅಸಮಾಧಾನ ಇದೆ. ಸರ್ಕಾರ ಇದನ್ನು ಮರು ಪರಿಶೀಲನೆ ಮಾಡುತ್ತದೆ ಎಂಬ ವಿಶ್ವಾಸವಿದೆ" ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
ಸಿನಿಮಾ ಮಂದಿರಗಳು, ಮಾಲ್ಗಳು ಮತ್ತು ಸಾರ್ವಜನಿಕ ಸಾರಿಗೆ ಶೇಕಡ 100ರಷ್ಟು ಭರ್ತಿಯಾಗಿ ಕಾರ್ಯ ನಿರ್ವಹಿಸಲು ಅವಕಾಶವಿರುವಾಗ ಹೋಟೆಲ್ಗಳಿಗೆ ಮಾತ್ರ ನಿರ್ಬಂಧ ಏಕೆ ಎನ್ನುವುದು ಹೋಟೆಲ್ ಮಾಲೀಕರ ಪ್ರಶ್ನೆ. ಈಗಷ್ಟೇ ನಾವು ನಷ್ಟದಿಂದ ಚೇತರಿಸಿಕೊಳ್ಳುತ್ತಿದ್ದೇವೆ. ಸಿನಿಮಾ ಮಂದಿರಗಳಲ್ಲಿ ಅಕ್ಕಪಕ್ಕ ಹಲವು ಗಂಟೆ ಜನ ಕುಳಿತುಕೊಳ್ಳಲು ಅವಕಾಶ ಇದೆ ಎಂದಾದರೆ 30 ನಿಮಿಷ ಕಾಲ ರೆಸ್ಟೋರೆಂಟ್ಗಳಲ್ಲಿ ಏಕೆ ಕೂರಬಾರದು ಎನ್ನುವುದು ಮಹಾಲಕ್ಷ್ಮಿಪುರಂ ಆದಿತ್ಯ ಹೋಟೆಲ್ ಮಾಲಕ ದೀಪಕ್ ಡಿ.ಎನ್. ಅವರ ಪ್ರಶ್ನೆ.







