ವೈದ್ಯರ ಮುಷ್ಕರ ತೀವ್ರ : ಆಸ್ಪತ್ರೆ ಬಂದ್‌ಗೆ ಕರೆ

ಹೊಸದಿಲ್ಲಿ: ನೀಟ್-ಪಿಜಿ ಕೌನ್ಸಿಲಿಂಗ್ ವಿಳಂಬದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದು, ಎಲ್ಲ ಆರೋಗ್ಯ ಸಂಸ್ಥೆಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಕರೆ ನೀಡಿದ್ದಾರೆ. ಮಂಗಳವಾರ ಕೂಡಾ ಮುಷ್ಕರ ಮುಂದುವರಿಯಲಿದೆ ಎಂದು ಪ್ರತಿಭಟನಾ ನಿರತ ವೈದ್ಯರು ಸ್ಪಷ್ಟಪಡಿಸಿದ್ದಾರೆ.
"ನಮ್ಮನ್ನು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿತ್ತು. ಚರ್ಚೆಯ ಬಳಿಕ ನಮ್ಮ ಪ್ರತಿಭಟನೆಯನ್ನು ಸಫ್ದರ್ ಜಂಗ್ ಅಸ್ಪತ್ರೆಯಿಂದ ಮುಂದುವರಿಸಲು ನಿರ್ಧರಿಸಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ, ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ನಾವು ಸಫ್ದರ್ ಜಂಗ್‌ಗೆ ಹಿಂದಿರುಗಿದ್ದೇವೆ. ನಮ್ಮ ಪ್ರತಿಭಟನೆ ಇಲ್ಲಿಂದಲೇ ಮುಂದುವರಿಸಲಿದ್ದೇವೆ" ಎಂದು ಎಫ್‌ಓಡಿಆರ್‌ಎ ಪ್ರಧಾನ ಕಾರ್ಯದರ್ಶಿ ಡಾ.ಕುಲ್ ಸೌರಭ್ ಕೌಶಿಕ್ ಹೇಳಿದ್ದಾರೆ.
ವೈದ್ಯರು ಸೋಮವಾರ ಸಂಜೆ ಸಫ್ದರ್ ಜಂಗ್ ಆಸ್ಪತ್ರೆ ಬಳಿ ಪ್ರತಿಭಟನಾ ಜಾಥ ನಡೆಸಿದ್ದು, ಈ ವೇಳೆ ಏಳು ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದು ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 188ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಏತನ್ಮಧ್ಯೆ ಸರ್ಕಾರದಿಂದ ಯಾವುದೇ ಸ್ಪಂದನೆ ಬಾರದಿದ್ದಲ್ಲಿ ಡಿಸೆಂಬರ್ 29ರಂದು ಮುಷ್ಕರ ನಡೆಸುವುದಾಗಿ ವೈದ್ಯರ ಸಂಘ ಎಚ್ಚರಿಕೆ ನೀಡಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಭಾಗಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಬಂಧಿತ ವೈದ್ಯರನ್ನು ತಕ್ಷಣ ಬಿಡುಗಡೆ ಮಾಡಿ, ಸರ್ಕಾರ ಪೊಲೀಸರ ದಬ್ಬಾಳಿಕೆಗೆ ಕ್ಷಮೆ ಕೋರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.







