ಚುನಾವಣೆ ಹತ್ತಿರ ಬರುತ್ತಿದ್ದಂತೆ ಡಿಕೆಶಿ, ಸಿದ್ದರಾಮಯ್ಯ ನಡುವಿನ ಜಗಳ ಹೆಚ್ಚಾಗಲಿದೆ: ಅರುಣ್ ಸಿಂಗ್

ಹುಬ್ಬಳ್ಳಿ, ಡಿ.28: ಕಾಂಗ್ರೆಸ್ ಒಡೆದ ಮನೆಯಾಗಿದೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಜಗಳ ಹೆಚ್ಚಾಗಿದೆ. ಇಬ್ಬರ ಅನುಯಾಯಿಗಳು ತಮ್ಮ ಮುಖಂಡನೇ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ಜಗಳ ಹೆಚ್ಚಾಗಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಂಪೂರ್ಣವಾಗಿ ವಿಫಲರಾಗಿದ್ದು, ಅವರಿಂದ ಇಲ್ಲಿನ ನಾಯಕರು ಯಾವುದೇ ರೀತಿಯ ಉತ್ತೇಜನವನ್ನು ನಿರೀಕ್ಷಿಸುವಂತಿಲ್ಲ. ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ನೇತೃತ್ವದಲ್ಲಿ ಆಡಳಿತ ನಡೆಸಿದಾಗ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದ್ದುದನ್ನು ಜನತೆ ಮರೆತಿಲ್ಲ ಎಂದು ಅವರು ತಿಳಿಸಿದರು.
'ಸರಳ, ಪ್ರಾಮಾಣಿಕ ರೀತಿಯಲ್ಲಿ ಮತ್ತು ಸಮರ್ಥ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರ ನೇತೃತ್ವದಲ್ಲೇ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ' ಎಂದರು.
ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಪ್ರಾಮಾಣಿಕರಿದ್ದಾರೆ. ಕೆಳಮಟ್ಟದಲ್ಲಿ ಭ್ರಷ್ಟಾಚಾರ ಇದ್ದಲ್ಲಿ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಮುಂದೆಯೂ ಬಿಜೆಪಿ ಸರಕಾರ ಬರಲಿದೆ. 150ಕ್ಕೂ ಹೆಚ್ಚು ಶಾಸಕರ ಸ್ಥಾನವನ್ನು ನಾವು ಗೆಲ್ಲಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಗಳು, ಪಾಲಿಕೆ ಚುನಾವಣೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಪಕ್ಷ ಪಡೆದಿದೆ. ಬಿಜೆಪಿ ಗ್ರಾಫ್ ಮೇಲೇರುತ್ತಿದೆ. ಕಾಂಗ್ರೆಸ್ ಗ್ರಾಫ್ ಕೆಳಗಿಳಿಯುತ್ತಿದೆ ಎಂದು ವಿಧಾನಪರಿಷತ್ ಚುನಾವಣೆ ಫಲಿತಾಂಶ ಕುರಿತ ಇನ್ನೊಂದು ಪ್ರಶ್ನೆಗೆ ಅವರು ಉತ್ತರಿಸಿದರು.







