ಬಿಜೆಪಿ ಕಾರ್ಯಕಾರಿಣಿಗೆ ಜಾರಕಿಹೊಳಿ ಸಹೋದರರು ಗೈರು

photo: @BJP4Karnataka
ಹುಬ್ಬಳ್ಳಿ, ಡಿ.28: ಬಿಜೆಪಿ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಾರಕಿಹೊಳಿ ಸಹೋದರರು ಸೇರಿದಂತೆ ಕೆಲ ಸಂಸದರು, ಶಾಸಕರು ಹಾಗೂ ಮುಖಂಡರು ಪಕ್ಷದ ಕಾರ್ಯಕಾರಿಣಿಗೆ ಗೈರಾಗಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅವರ ಪುತ್ರರಾದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾರ್ಯಕಾರಿಣಿ ನಡೆಯುತ್ತಿರುವ ಸ್ಥಳದತ್ತ ಸುಳಿಯಲಿಲ್ಲ. ಇನ್ನು ಇತ್ತೀಚೆಗೆ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ ಜಾರಕಿಹೊಳಿ ಸಹೋದರರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಗೈರು ಹಾಜರಿ ಕೂಡ ಎದ್ದು ಕಾಣುತ್ತಿತ್ತು.
ಸಚಿವರಾದ ಶ್ರೀರಾಮುಲು, ಹಾಲಪ್ಪ ಆಚಾರ್, ಆನಂದ್ ಸಿಂಗ್, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಕೆಲ ಶಾಸಕರು ಕಾರ್ಯಕಾರಿಣಿಗೆ ತಡವಾಗಿ ಬಂದರು.
ಕಾರ್ಯಕಾರಿಣಿ ಸಂದರ್ಭದಲ್ಲೇ ಯಡಿಯೂರಪ್ಪ ಅವರು ದುಬೈ ಪ್ರವಾಸ ಕೈಗೊಂಡಿರುವುದು ಹಾಗೂ ಅವರ ಪುತ್ರರು ಕೂಡ ಬಾರದಿರುವುದು ಪಕ್ಷದೊಳಗೆ ಗುಸುಗುಸು ಮಾತುಗಳಿಗೆ ಎಡೆಮಾಡಿಕೊಟ್ಟಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿಗೆ ಸೋಲುಂಟಾದ ಬಗ್ಗೆ ಕಾರ್ಯಕಾರಿಣಿಯಲ್ಲಿ ಪರಾಮರ್ಶೆ ನಡೆಸಲಾಗುವುದು. ಜೊತೆಗೆ, ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದರು.
19 ಮಂದಿ ಅನುಮತಿ ಪಡೆದು ಗೈರು
ಕಾರ್ಯಕಾರಿಣಿಗೆ ನಿಗದಿಪಡಿಸಲಾಗಿದ್ದ 300 ಜನರ ಪೈಕಿ 281 ಮಂದಿ ಮೊದಲ ದಿನದ ಸಭೆಗೆ ಹಾಜರಾಗಿದ್ದಾರೆ. ಉಳಿದ 19 ಮಂದಿ ಅನುಮತಿ ಪಡೆದುಕೊಂಡೇ ಗೈರಾಗಿದ್ದಾರೆ. ಗೈರಾದವರು ಮೊದಲ ದಿನ ಮಾತ್ರ ಅನುಮತಿ ಪಡೆದಿರುವುದಾಗಿ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ.
-ಪಿ. ರಾಜೀವ್, ಬಿಜೆಪಿ ವಕ್ತಾರ
ಎಲ್ಲರೂ ಬರಲೇಬೇಕು ಎಂದೇನಿಲ್ಲ
ಎಲ್ಲಾ ಸಚಿವರು, ಸಂಸದರು ಹಾಗೂ ಶಾಸಕರು ಪಕ್ಷದ ಕಾರ್ಯಕಾರಿಣಿಗೆ ಬರಲೇಬೇಕು ಎಂದೇನಿಲ್ಲ. ಆಯ್ದ ಸಚಿವರು ಹಾಗೂ ಪದಾಧಿಕಾರಿಗಳಷ್ಟೇ ಪಾಲ್ಗೊಳ್ಳುತ್ತಾರೆ .
ನಗರದಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿಗೆ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತವರ ಪುತ್ರರು, ಜಾರಕಿಹೊಳಿ ಸಹೋದರರು ಸೇರಿದಂತೆ ಅನೇಕ ಮಂದಿ ಗೈರಾಗಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರ ವಿದೇಶ ಪ್ರವಾಸ ಮುಂಚೆಯೇ ನಿಗದಿಯಾಗಿತ್ತು. ಉಳಿದವರು ಬರಲೇಬೇಕು ಅಂತೇನಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿಗೂ ಕೇಂದ್ರ ಸಚಿವರು ಮತ್ತು ಸಂಸದರು ಗೈರಾಗುವುದು ಸಾಮಾನ್ಯ
- ಕೇಂದ್ರ ಸಚಿವ ಪ್ರಲ್ಹಾದ ಜೋಶಿ







