ವಿಶ್ವದ ಹಲವೆಡೆ ಕೊರೋನ ಸೋಂಕು ಉಲ್ಬಣ: ಇನ್ನಷ್ಟು ನಗರಗಳಿಗೆ ಲಾಕ್ಡೌನ್ ವಿಸ್ತರಿಸಿದ ಚೀನಾ

ಸಾಂದರ್ಭಿಕ ಚಿತ್ರ:PTI
ಬೀಜಿಂಗ್, ಡಿ.28: ಅಮೆರಿಕ ಹಾಗೂ ಯುರೋಪ್ ನಲ್ಲಿ ಕೊರೋನ ಸೋಂಕು ಪ್ರಕರಣ ಉಲ್ಬಣಗೊಳ್ಳುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇನ್ನಷ್ಟು ಪ್ರದೇಶಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದೆ ಎಂದು ಚೀನಾದ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಸೋಂಕು ಪ್ರಕರಣ ಉಲ್ಬಣಿಸುತ್ತಿರುವಂತೆಯೇ ಯುರೋಪ್ ಮತ್ತು ಉತ್ತರ ಅಮೆರಿಕದ ಹಲವು ದೇಶಗಳು ಆರ್ಥಿಕ ಚಟುವಟಿಕೆಗಳಿಗೆ ತೊಡಕಾಗುವ ನಿರ್ಬಂಧ ಹಾಗೂ ಸೋಂಕು ಹರಡದಂತೆ ನಿಯಂತ್ರಣ ಕ್ರಮದ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿವೆ. ರೋಗಲಕ್ಷಣವಿಲ್ಲದ ಪ್ರಕರಣಗಳಲ್ಲಿ ಪ್ರತ್ಯೇಕ ವಾಸ ಪ್ರಕ್ರಿಯೆಯನ್ನು ಕಡಿಮೆಗೊಳಿಸಲು ಅಮೆರಿಕ ನಿರ್ಧರಿಸಿದ್ದರೆ, ಉದ್ಯೋಗಿಗಳಿಗೆ ವಾರದಲ್ಲಿ 3 ದಿನ ಮನೆಯಿಂದಲೇ ಕೆಲಸ ಎಂದು ಫ್ರಾನ್ಸ್ ಘೋಷಿಸಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಚೀನಾದಲ್ಲಿ ಕೊರೋನ ಸೋಂಕಿನ ಪ್ರಕರಣ ಕಡಿಮೆ ಇದ್ದರೂ, ಕೊರೋನ ಪ್ರಕರಣವನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಕಾರ್ಯತಂತ್ರದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಚೀನಾ ಘೋಷಿಸಿದ್ದು ಯನಾನ್ ನಗರದ ಹಲವೆಡೆ ಲಾಕ್ಡೌನ್ ಜಾರಿಗೊಳಿಸಿದೆ.
ಸುಮಾರು 13 ಮಿಲಿಯನ್ ಜನಸಂಖ್ಯೆ ಇರುವ ಕ್ಸಿಯಾನ್ ನಗರದಲ್ಲಿ ಡಿ.21ರಿಂದ ಲಾಕ್ಡೌನ್ ಜಾರಿಯಲ್ಲಿದ್ದು ಆಹಾರ ವಸ್ತುಗಳಿಗೆ ಪರದಾಡುವ ಪರಿಸ್ಥಿತಿಯಿದೆ ಎಂದು ವರದಿಯಾಗಿದೆ. ಈ ನಗರದಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಮಾತ್ರ 3 ದಿನಕ್ಕೊಮ್ಮೆ ಮನೆಯಿಂದ ಹೊರಗೆ ಹೋಗಿ ಆಹಾರ, ದಿನಬಳಕೆಯ ವಸ್ತು ಖರೀದಿಸಲು ಅವಕಾಶವಿದೆ.
ಈ ಮಧ್ಯೆ, ಸೋಂಕು ಪ್ರಕರಣ ಉಲ್ಬಣಿಸಿದ್ದರಿಂದ ಶುಕ್ರವಾರದಿಂದ ವಿಶ್ವದಾದ್ಯಂತ ಸುಮಾರು 11,500 ವಿಮಾನ ಸಂಚಾರ ರದ್ದುಗೊಂಡಿದೆ ಮತ್ತು ಸಾವಿರಾರು ವಿಮಾನಗಳ ಸಂಚಾರವನ್ನು ವಿಳಂಬಿಸಲಾಗಿದೆ. ವಿಮಾನ ಯಾನ ಸಂಸ್ಥೆಗಳ ಸಿಬಂದಿಗಳಿಗೆ ಸೋಂಕು ದೃಢಪಟ್ಟಿರುವುದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಅಮೆರಿಕದಲ್ಲಿ ಸೋಂಕು ಹೆಚ್ಚಳಕ್ಕೆ ಒಮೈಕ್ರಾನ್ ರೂಪಾಂತರಿ ಮೂಲ ಕಾರಣವಾಗಿದ್ದರೆ ಹಲವು ಜನ ಇನ್ನೂ ಲಸಿಕೆ ಹಾಕಿಸಿಕೊಳ್ಳದಿರುವುದು ಮತ್ತೊಂದು ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







