ಕೇರಳದ ತಲಶ್ಶೇರಿ ಕೋಳಿ ತಳಿಗೆ ರಾಷ್ಟ್ರೀಯ ಮಾನ್ಯತೆ

(photo:The New INDIAN EXPRESS)
ಕೋಝಿಕೋಡ್,ಡಿ.28: ಕೇರಳ ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿವಿಯ ಅಧೀನದಲ್ಲಿರುವ ಮನ್ನುತ್ತಿಯ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ (ಎಐಸಿಆರ್ಪಿ) ಕೇಂದ್ರವು ರಾಜ್ಯದಲ್ಲಿ ಏಕೈಕ ನೋಂದಾಯಿತ ತಳಿಯಾಗಿರುವ ತಲಶ್ಶೇರಿ ಕೋಳಿ ತಳಿಯ ಸಂರಕ್ಷಣೆ ಮತ್ತು ಅದಕ್ಕೆ ಸಂಬಂಧಿಸಿದ ಸಂಶೋಧನಾ ಚಟುವಟಿಕೆಗಳಿಗಾಗಿ 2021ನೇ ಸಾಲಿನ ರಾಷ್ಟ್ರೀಯ ತಳಿ ಸಂರಕ್ಷಣೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಈಗ ಆರನೇ ಪೀಳಿಗೆಯಲ್ಲಿರುವ ತಳಿಯ ಸಂರಕ್ಷಣೆಗಾಗಿ ಕೇಂದ್ರವು ಪ್ರತಿಷ್ಠಿತ ಐಸಿಎಆರ್-ಎನ್ಎಬಿಜಿಆರ್ (ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸ್ಸ್) ಪ್ರಶಸ್ತಿಗೆ ಭಾಜನವಾಗಿದೆ. ಕೇಂದ್ರವು ಏಳು ವರ್ಷಗಳ ಹಿಂದೆ ತಲಶ್ಶೇರಿಯಿಂದ ತರಲಾಗಿದ್ದ ಕೋಳಿ ತಳಿಯ ಸಂರಕ್ಷಣೆಯನ್ನು ಆರಂಭಿಸಿತ್ತು.
ಇತರ ಸ್ವದೇಶಿ ತಳಿಗಳಿಗೆ ಹೋಲಿಸಿದರೆ ತನ್ನ ಹಗುರ ಶರೀರ ಮತ್ತು ಮೊಟ್ಟೆ ಹಾಗೂ ಸುದೀರ್ಘ ಕಾವು ಕೊಡುವಿಕೆಯಿಂದ ತಲಶ್ಶೇರಿ ಕೋಳಿಯು ವಿಶಿಷ್ಟವಾಗಿದೆ ಎಂದು ಎಐಸಿಆರ್ಪಿಯ ಸಹಾಯಕ ಪ್ರೊಫೆಸರ್ ಡಾ.ಸುಜಾ ಸಿ.ಎಸ್ ತಿಳಿಸಿದರು.
ಕೇಂದ್ರವು ಈಗ ಆರನೇ ಪೀಳಿಗೆಯನ್ನು ಸಂರಕ್ಷಿಸುತ್ತಿದ್ದು,ಪ್ರತಿ ಪೀಳಿಗೆಯೂ 650-700 ಹೇಂಟೆಗಳು ಮತ್ತು 150-200 ಹುಂಜಗಳನ್ನು ಹೊಂದಿದೆ. ಸಂಶೋಧನೆ,ಅಧ್ಯಯನ ಮತ್ತು ಮೊಟ್ಟೆಯೊಡೆದು ಮರಿಗಳು ಹೊರಬಂದ ಬಳಿಕ ಹಿಂದಿನ ಪೀಳಿಗೆಯನ್ನು ಕೊಲ್ಲಲಾಗುತ್ತದೆ.
ಸೂಕ್ತವಾದ ಪೋಷಣೆ,ಸಕಾಲಕ್ಕೆ ಲಸಿಕೆ ನೀಡಿಕೆ ಇತ್ಯಾದಿ ಕ್ರಮಗಳಿಂದಾಗಿ ತಲಶ್ಶೇರಿ ತಳಿಯ ಕೋಳಿಗಳು ಐದು ತಿಂಗಳ ಪ್ರಾಯಕ್ಕೆ ಮೊಟ್ಟೆಗಳನ್ನಿಡಲು ಆರಂಭಿಸುತ್ತವೆ ಮತ್ತು ಪ್ರತಿ ಕೋಳಿಯಿಂದ ವಾರ್ಷಿಕ ಮೊಟ್ಟೆಗಳ ಉತ್ಪಾದನೆಯನ್ನು ಈಗ 160-170ಕ್ಕೆ ಹೆಚ್ಚಿಸಲಾಗಿದೆ. ಇತರ ದೇಶಿಯ ತಳಿಗಳು ಆರರಿಂದ ಎಂಟು ತಿಂಗಳುಗಳ ಪ್ರಾಯದಲ್ಲಿ ಮೊಟ್ಟೆಗಳನ್ನು ಇಡಲು ಆರಂಭಿಸುತ್ತವೆ ಮತ್ತು ವಾರ್ಷಿಕ ಉತ್ಪಾದನೆಯು ಕೇವಲ 70-80 ಮೊಟ್ಟೆಗಳಷ್ಟಿದೆ ಎಂದು ಡಾ.ಸುಜಾ ತಿಳಿಸಿದರು.







