60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಗೆ ವೈದ್ಯರ ಪ್ರಮಾಣಪತ್ರ ಅಗತ್ಯತೆ ಇಲ್ಲ

ಹೊಸದಿಲ್ಲಿ, ಡಿ. 28: ಹಲವು ರೋಗಗಳಿರುವ 60 ವರ್ಷ ಮೇಲ್ಪಟ್ಟವರು ಕೋವಿಡ್ ವಿರುದ್ಧ ಮುನ್ನೆಚ್ಚರಿಕಾ ಡೋಸ್ ಅಥವಾ ಬೂಸ್ಟರ್ ಡೋಸ್ಗೆ ಅರ್ಹರಾಗಲು ತಾವು ‘ಅತಿ ಅಪಾಯಾದ ವರ್ಗ’ಕ್ಕೆ ಸೇರಿದವರು ಎಂದು ತೋರಿಸಲು ವೈದ್ಯರ ಪ್ರಮಾಣ ಪತ್ರ ಅಥವಾ ಶಿಫಾರಸು ಚೀಟಿ ಹಾಜರುಪಡಿಸುವ ಅಗತ್ಯತೆ ಇಲ್ಲ.
ವೈದ್ಯಕೀಯ ವೃತ್ತಿಪರರು, ಮುಂಚೂಣಿ ಆರೋಗ್ಯ ಸಿಬ್ಬಂದಿ ಹಾಗೂ ಹಲವು ರೋಗಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು ಜನವರಿ 10ರಿಂದ ಬೂಸ್ಟರ್ ಡೋಸ್ಗಳನ್ನು ಪಡೆದುಕೊಳ್ಳಬಹುದು. ಅತಿ ತೀವ್ರವಾಗಿ ಹರಡುವ ಒಮೈಕ್ರಾನ್ ಪ್ರಬೇಧದ ಆತಂಕದ ಹಿನ್ನೆಲೆಯಲ್ಲಿ ಆಡಳಿತ ಬೂಸ್ಟರ್ ಡೋಸ್ ನೀಡುವುದಾಗಿ ಕೇಂದ್ರ ಸರಕಾರ ಸೋಮವಾರ ಘೋಷಿಸಿತ್ತು.
‘‘ಹಲವು ರೋಗಗಳು ಇರುವ ಬಗ್ಗೆ ವೈದ್ಯರ ಪ್ರಮಾಣಪತ್ರ ಅಥವಾ ಶಿಫಾರಸು ಚೀಟಿಯ ಅಗತ್ಯತೆ ಇಲ್ಲ. ಮುನ್ನೆಚ್ಚರಿಕೆ ಡೋಸ್ ಅನ್ನು ಆಯ್ಕೆ ಮಾಡುವ ಮೊದಲು 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ವೈದ್ಯರು ಸಲಹೆ ನೀಡುತ್ತಾರೆ ’’ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
15ರಿಂದ 18 ವಯೋಮಾನದ ಮಕ್ಕಳಿಗೆ ಲಸಿಕೀಕರಣ ಜನವರಿ 3ರಂದು ಆರಂಭಗೊಳ್ಳಲಿದೆ. ಕೋವಿನ್ ಮೂಲಕ ಆನ್ಲೈನ್ ನೋಂದಣಿ ಮಾಡಲು ಅವರಿಗೆ ಅವಕಾಶ ನೀಡಲಾಗಿದೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವವನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಲಾಗುವುದು. ಅವರು ಮುನ್ನೆಚ್ಚರಿಕಾ ಡೋಸ್ಗಳಿಗೆ ಅರ್ಹರಾಗಿರುತ್ತಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
‘‘15ರಿಂದ 18 ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಸಂಬಂಧಿಸಿ ಅಸ್ತಿತ್ವದಲ್ಲಿರುವ ಎಲ್ಲ ಶಿಷ್ಟಾಚಾರಗಳನ್ನು ಅನುಸರಿಸಲಾಗುವುದು. ಫಲಾನುಭವಿಗಳು ಅರ್ಧ ಗಂಟೆಗಳ ಕಾಲ ಕಾಯಬೇಕು. ಎಇಎಫ್ಐಗಾಗಿ ಅವರನ್ನು ಪರಿಶೀಲಿಸಲಾಗುವುದು. ಅವರು 28 ದಿನಗಳ ಬಳಿಕ ಎರಡನೇ ಡೋಸ್ ಗೆ ಅರ್ಹರು’’ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.







