ಚಿಕ್ಕಮಗಳೂರು ನಗರಸಭೆ ಚುನಾವಣೆ: ಮತದಾನದಿಂದ ದೂರ ಉಳಿದ 40 ಸಾವಿರಕ್ಕೂ ಹೆಚ್ಚು ಮತದಾರರು!

ಫೈಲ್ ಚಿತ್ರ - (ಚಿಕ್ಕಮಗಳೂರು ನಗರಸಭೆ)
ಚಿಕ್ಕಮಗಳೂರು, ಡಿ.28: ಇಲ್ಲಿನ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.60.74ರಷ್ಟು ಮತದಾನವಾಗಿರುವುದು ದಾಖಲಾಗಿದ್ದು, ನಗರದ 35 ವಾರ್ಡ್ಗಳ 100183 ಮತದಾರರ ಪೈಕಿ 60855 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.
ಚಿಕ್ಕಮಗಳೂರು ನಗರಸಭೆಗೆ ಡಿ.27ರಂದು ಮತದಾನ ನಡೆದಿದ್ದು, ಶೇ.60.74ರಷ್ಟು ಮಂದಿ ಮಾತ್ರ ಮತದಾನ ಮಾಡಿದ್ದು, 40 ಸಾವಿರ ಮತದಾರರು ಮತದಾನ ಮಾಡದೇ ನಿರ್ಲಕ್ಷ್ಯವಹಿಸಿರುವುದು ಕಂಡು ಬಂದಿದೆ. ನಗರದ ಜನತೆ ಮತದಾನಕ್ಕೆ ಹೆಚ್ಚು ಉತ್ಸಾಹ ತೋರದಿರುವ ಬಗ್ಗೆ ಸದ್ಯ ವ್ಯಾಪಕ ಚರ್ಚೆ ನಡೆದಿದ್ದು, ನಗರಸಭೆ ಆಡಳಿತದ ವಿರುದ್ಧ ನಗರದ ಜನರು ರೋಸಿ ಹೋಗಿರುವ ಪರಿಣಾಮ ಇದಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯ 35 ವಾರ್ಡ್ಗಳಲ್ಲಿ 100183 ಮಂದಿ ಮತದಾರರಿದ್ದು, ಈ ಪೈಕಿ 49,150 ಪುರುಷ ಹಾಗೂ 51015 ಮಹಿಳಾ ಮತದಾರರಿದ್ದಾರೆ. ಸೋಮವಾರ ನಗರದ 110 ಮತಗಟ್ಟೆಗಳ ಮೂಲಕ 60,855 ಮಂದಿ ಮಾತ್ರ ಮತದಾನದ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 30580 ಮಂದಿ ಪುರುಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರೇ, 30275 ಮಂದಿ ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯ 35 ವಾರ್ಡ್ಗಳ ಪೈಕಿ 9ನೇ ವಾರ್ಡಿನಲ್ಲಿ ಶೇ.81.11ರಷ್ಟು ಮತದಾನವಾಗಿದ್ದು, ಅತೀ ಹೆಚ್ಚು ಮತದಾನ ನಡೆದಿರುವ ವಾರ್ಡ್ ಆಗಿದೆ. ವಾರ್ಡ್ ನಂ.26ರಲ್ಲಿ 52.07ರಷ್ಟು ಮತದಾನವಾಗಿದ್ದು, ಅತೀ ಕಡಿಮೆ ಮತದಾನವಾಗಿರುವ ವಾರ್ಡ್ ಆಗಿದೆ. 9ನೇ ವಾರ್ಡಿನ 2165 ಮತದಾರರ ಪೈಕಿ 1756 ಮಂದಿ ಮತದಾನ ಮಾಡಿದ್ದು, 26ನೇ ವಾರ್ಡಿನಲ್ಲಿ 2940 ಮತದಾರರ ಪೈಕಿ 1531 ಮಂದಿ ಮಾತ್ರ ಮತದಾನ ಮಾಡಿದ್ದಾರೆ.
ಒಟ್ಟಾರೆ ಚಿಕ್ಕಮಗಳೂರು ನಗರದ ಒಟ್ಟು ಮತದಾರರ ಪೈಕಿ 40 ಸಾವಿರಕ್ಕೂ ಹೆಚ್ಚು ಮತದಾರರು ಈ ಬಾರಿ ಮತದಾನದಿಂದ ದೂರ ಉಳಿದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.







