ಚೀನಾಕ್ಕೆ ಹೊರಟಿದ್ದ ಅಮೆರಿಕ ವಿಮಾನ ಸ್ವದೇಶಕ್ಕೆ ವಾಪಸು

ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್, ಡಿ.28: ಅಮೆರಿಕದ ಸಿಯಾಟಲ್ನಿಂದ ಚೀನಾದ ಶಾಂಘೈಗೆ ಹೊರಟಿದ್ದ ಡೆಲ್ಟಾ ಏರ್ಲೈನ್ ನ ವಿಮಾನ ಆಗಸದ ಮಧ್ಯೆಯೇ ಪಥ ಬದಲಿಸಿ ಮರಳಿ ಅಮೆರಿಕಕ್ಕೆ ಮರಳಿದ ಪ್ರಕರಣ ಉಭಯ ದೇಶಗಳ ಮಧ್ಯೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಕೊರೋನ ಸೋಂಕು ಉಲ್ಬಣಿಸಿದ ಹಿನ್ನೆಲೆಯಲ್ಲಿ ಚೀನಾ ಹೊಸದಾಗಿ ಜಾರಿಗೊಳಿಸಿದ ನಿಯಮದ ಗೊಂದಲದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡೆಲ್ಟಾ ಏರ್ಲೈನ್ ಸಂಸ್ಥೆ ಹೇಳಿದೆ. ಚೀನಾ ಜಾರಿಗೊಳಿಸಿದ ನೂತನ ನಿಯಮ(ವಿಮಾನವನ್ನು ಸ್ವಚ್ಛಗೊಳಿಸುವುದಕ್ಕೆ ಸಂಬಂಧಿ)ದ ಪ್ರಕಾರ ಶಾಂಘೈ ನಿಲ್ದಾಣದಲ್ಲಿ ನಮ್ಮ ವಿಮಾನ ನಿಲುಗಡೆಗೊಳ್ಳುವ ಅವಧಿ ವಿಸ್ತರಿಸಲ್ಪಡುತ್ತದೆ. ಆದರೆ ಇದು ಸಂಸ್ಥೆಗೆ ಕಾರ್ಯಸಾಧ್ಯವಲ್ಲ. ಈ ಘಟನೆಯಿಂದ ನಮ್ಮ ಗ್ರಾಹಕರಿಗೆ ಆಗಿರುವ ಅನಾನುಕೂಲಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದು ಡೆಲ್ಟಾ ಏರ್ಲೈನ್ಸ್ ಹೇಳಿದೆ.
ಇದರಿಂದ ಚೀನಾದ ಹಲವು ಪ್ರಜೆಗಳಿಗೆ ಸಮಸ್ಯೆಯಾಗಿದೆ. ವೀಸಾ ಅವಧಿ ಮುಗಿದಿರುವ ಅಥವಾ ಕೋವಿಡ್ ಪರೀಕ್ಷೆ ವರದಿಯ ಗಡುವು ಮುಗಿಯುವುದರಿಂದ ಇವರೀಗ ತೀವ್ರ ಬಿಕ್ಕಟ್ಟು ಎದುರಿಸುವಂತಾಗಿದೆ ಎಂದು ಸಾನ್ಫ್ರಾನ್ಸಿಸ್ಕೋದಲ್ಲಿನ ಚೀನಾದ ಕಾನ್ಸುಲೇಟ್ ಕಚೇರಿ ದೂರಿದೆ.





