ಗುಂಪಿನಿಂದ ಥಳಿಸಿ ಹತ್ಯೆ ತಡೆ ಕಾಯ್ದೆ ಜಾರಿ: ಜಾರ್ಖಂಡ್ ಮುಖ್ಯಮಂತ್ರಿ ಸಮರ್ಥನೆ

ಗುವಾಹತಿ, ಡಿ. 28: ‘ರಾವಣ’ ಪಕ್ಷ ಕೇಂದ್ರದಲ್ಲಿ ಅಧಿಕಾರ ಗಳಿಸಿದ ಹಾಗೂ ದೇಶದಲ್ಲಿ ಸಾಮಾಜಿಕ ಸಂರಚನೆ ಹಾಳಾದ ಬಳಿಕ ಗುಂಪಿನಿಂದ ಥಳಿಸಿ ಹತ್ಯೆ ಕಾಯ್ದೆ ಜಾರಿಗೆ ತರುವ ಒತ್ತಾಯಕ್ಕೆ ತನ್ನ ಸರಕಾರ ಒಳಗಾಯಿತು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮಂಗಳವಾರ ಹೇಳಿದ್ದಾರೆ.
ಈ ನಡುವೆ ಬಿಜೆಪಿ, ಸೊರೇನ್ ಭ್ರಷ್ಟ ಸರಕಾರವನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ, ಅವರು ಅಸಾಂವಿಧಾನಿಕ ಗುಂಪಿನಿಂದ ಥಳಿಸಿ ಹತ್ಯೆ ತಡೆ ಕಾಯ್ದೆಯನ್ನು ಅಂಗೀಕರಿಸಿದ್ದಾರೆ. ಇದು ಆಡಳಿತಾರೂಢ ಸರಕಾರದ ತುಷ್ಟೀಕರಣ ನೀತಿ ಎಂದಿದೆ. ಸರಕಾರ ಎರಡು ವರ್ಷ ಪೂರ್ಣಗೊಳಿಸುವ ಎರಡು ದಿನಗಳ ಮುನ್ನ ತನ್ನ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸೊರೇನ್, ಮಹಿಳೆಯರ ವಿವಾಹದ ವಯಸ್ಸನ್ನು ಏರಿಕೆ ಮಾಡಿದ ಕೇಂದ್ರ ಸರಕಾರದ ನಿರ್ಧಾರ ರಾಜಕೀಯ ನಡೆ ಎಂದರು.
ಕೇಂದ್ರ ಸರಕಾರ ರಾಜ್ಯದಲ್ಲಿ ಜಾತಿ ಆಧಾರಿತ ಸಮೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ತನ್ನ ಸರಕಾರ ಸಮುದಾಯವೊಂದರ ತುಷ್ಟೀಕರಣದಲ್ಲಿ ತೊಡಗಿದೆ ಎಂಬ ಬಿಜೆಪಿಯ ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ಸೊರೇನ್, ‘‘ಭಾರತವನ್ನು ಹಿಂದೂ ರಾಷ್ಟ್ರವಾಗಿ ರೂಪಿಸಲು ಜನರು ಪ್ರಮಾಣ ಮಾಡುತ್ತಿರುವ ಕುರಿತು ವರದಿಯನ್ನು ನಾನು ನೋಡಿದೆ. ನಾವು ನಮಾಝ್ ಮಾಡಲು ಮಸೀದಿಯನ್ನು ನಿರ್ಮಿಸಿದ್ದೇವೆಯೇ ? ಬಿಜೆಪಿ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ’’ ಎಂದರು.







