‘ಇರುವೆ ಮನುಷ್ಯ’ ಎಡ್ವರ್ಡ್ ವಿಲ್ಸನ್ ನಿಧನ

photo:twitter
ನ್ಯೂಯಾರ್ಕ್, ಡಿ.28: ಇರುವೆ ಮನುಷ್ಯ ಎಂದೇ ಹೆಸರಾದ ಪುಲಿಟ್ಝರ್ ಪ್ರಶಸ್ತಿ ವಿಜೇತ ಖ್ಯಾತ ಜೀವವಿಜ್ಞಾನಿ ಎಡ್ವರ್ಡ್ ಒ ವಿಲ್ಸನ್ ಬಾಸ್ಟನ್ನಲ್ಲಿ ಡಿ.26ರಂದು ಬಲಿಂಗ್ಟನ್ನಲ್ಲಿ ನಿಧನರಾಗಿದ್ದಾರೆ ಎಂದು ಇ.ಒ ವಿಲ್ಸನ್ ಜೀವವೈವಿಧ್ಯ ಪ್ರತಿಷ್ಠಾನದ ವೆಬ್ಸೈಟ್ನಲ್ಲಿ ಸೋಮವಾರ ಮಾಹಿತಿ ನೀಡಲಾಗಿದೆ.
ಕೀಟಶಾಸ್ತ್ರಜ್ಞನಾಗಿ ವಿಲ್ಸನ್ ಮಾಡಿರುವ ಮಾರ್ಗದರ್ಶಕ ಕಾರ್ಯಗಳಿಂದಾಗಿ ಅವರನ್ನು ಪ್ರೀತಿಯಿಂದ ಇರುವೆ ಮನುಷ್ಯ ಎಂದೇ ಕರೆಯಲಾಗುತ್ತಿತ್ತು. ಯುದ್ಧ ಮತ್ತು ಪರಹಿತ ಚಿಂತನೆಯಂತಹ ಮಾನವ ನಡವಳಿಕೆಯು ಅನುವಂಶಿಕ ಆಧಾರವನ್ನು ಹೊಂದಿದೆ ಎಂಬ ಪ್ರಭಾವೀ ಸಿದ್ಧಾಂತವನ್ನು ಮುಂದಿಟ್ಟಿದ್ದ ವಿಲ್ಸನ್, ಪರಿಸರ ವ್ಯವಸ್ಥೆಗಳ ಅವನತಿಯ ಬಗ್ಗೆ ಎಚ್ಚರಿಕೆ ನೀಡಿದ್ದರು.
ಡಾರ್ವಿನ್ ರ ಸಹಜ ಉತ್ತರಾಧಿಕಾರಿ ಎಂದೇ ಕರೆಸಿಕೊಂಡಿದ್ದ ವಿಲ್ಸನ್ ಬರಹಗಾರನಾಗಿಯೂ ಪ್ರಸಿದ್ಧಿ ಹೊಂದಿದ್ದರು ಮತ್ತು 2 ಬಾರಿ ಪುಲಿಟ್ಝರ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು. 1975ರಲ್ಲಿ ಪ್ರಕಟವಾದ ‘ಸಮಾಜ ಜೀವಶಾಸ್ತ್ರ: ಹೊಸ ಸಂಯೋಗ’ ಎಂಬ ಕೃತಿಯಲ್ಲಿ ಮನುಷ್ಯರ ವರ್ತನೆ ಮತ್ತು ಅನುವಂಶಿಕತೆಯ ಬಗ್ಗೆ ಮೊತ್ತ ಮೊದಲ ಬಾರಿಗೆ ಉಲ್ಲೇಖಿಸಿ ಗಮನ ಸೆಳೆದಿದ್ದರು. ಈ ಕೃತಿಯ ಬಗ್ಗೆ ಸಹ ಶಿಕ್ಷಣತಜ್ಞರು ಹಾಗೂ ಹೋರಾಟಗಾರರು ತೀವ್ರ ಅಸಮಾಧಾನ ಸೂಚಿಸಿದ್ದರು.
ವಿಲ್ಸನ್ ಅವರ ವೈಜ್ಞಾನಿಕ ಸಾಧನೆಗಳನ್ನು ತಿಳಿದುಕೊಳ್ಳಲು ಕಷ್ಟವಾಗಬಹುದು, ಆದರೆ ಅವರ ಪ್ರಭಾವ ಸಮಾಜದ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿದೆ. ಪ್ರೇರೇಪಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿದ್ದ ಅವರೊಬ್ಬ ನಿಜವಾದ ದಾರ್ಶನಿಕರಾಗಿದ್ದರು. ಮಾನವನಾಗುವುದು ಎಂದರೆ ಏನು ಎಂಬುದನ್ನು ಬಹುಷಃ ಇತರರಿಗಿಂತ ಉತ್ತಮವಾಗಿ ಅವರು ಹೇಳಿದ್ದಾರೆ ಎಂದು ಇ.ಒ ವಿಲ್ಸನ್ ಜೀವವೈವಿಧ್ಯ ಪ್ರತಿಷ್ಠಾನದ ಅಧ್ಯಕ್ಷ ಡೇವಿಡ್ ಜೆ ಪ್ರೆಂಡ್ ಹೇಳಿದ್ದಾರೆ.







