ನಗರದಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್: ಅಪಾರ್ಟ್‍ಮೆಂಟ್‍ನ 21 ಮಂದಿಗೆ ಕೊರೋನ

ಬೆಂಗಳೂರು, ಡಿ.28: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ವರದಿಯಾಗಿದ್ದು, ರಾಜಾಜಿನಗರ ಅಪಾರ್ಟ್‍ಮೆಂಟ್‍ನ 21 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಒಂದು ವಾರದ ಅವಧಿಯಲ್ಲಿ ರಾಜಾಜಿನಗರದ ಅಪಾರ್ಟ್‍ಮೆಂಟ್‍ನಲ್ಲಿ 21 ಕೊರೋನ ಪ್ರಕರಣಗಳು ವರದಿಯಾಗಿದ್ದು, ಇದು ನಗರದಲ್ಲಿ ಮತ್ತೊಂದು ಕ್ಲಸ್ಟರ್ ಸೃಷ್ಟಿಗೆ ಕಾರಣವಾಗಿದೆ. ರಾಜಾಜಿನಗರದಲ್ಲಿರುವ ಇಂದ್ರಪ್ರಸ್ಥ ಅಪಾರ್ಟ್‍ಮೆಂಟ್‍ನಲ್ಲಿ ಹಲವು ನಿವಾಸಿಗಳು ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಕೆಲವು ನಿವಾಸಿಗಳು ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ ತ್ರಿಲೋಕ್ ಚಂದ್ರ ಅವರು, ನಾವು ಅವರ ಪ್ರಯಾಣದ ಹಿನ್ನೆಲೆಯಲ್ಲಿ ಸಂಗ್ರಹಿಸುತ್ತಿದ್ದೇವೆ. ಯಾವ ರೂಪಾಂತರವು ಕ್ಲಸ್ಟರ್‍ಗೆ ಕಾರಣವಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್‍ಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು.
ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ 98 ಸಕ್ರಿಯ ಕಂಟೈನ್‍ಮೆಂಟ್ ವಲಯಗಳನ್ನು ಹೊಂದಿದ್ದು ಈ ಪೈಕಿ 31 ವಲಯಗಳು ಬೊಮ್ಮನಹಳ್ಳಿ ವಲಯದಲ್ಲಿವೆ. ಇದರ ನಂತರ ದಕ್ಷಿಣ ವಲಯದಲ್ಲಿ 19, ಮಹದೇವಪುರದಲ್ಲಿ 14, ಪೂರ್ವ ವಲಯದಲ್ಲಿ 13, ಪಶ್ಚಿಮದಲ್ಲಿ 10, ಯಲಹಂಕದಲ್ಲಿ 6 ಮತ್ತು ಆರ್‍ಆರ್ ನಗರದಲ್ಲಿ ಐದು ಕಂಟೈನ್‍ಮೆಂಟ್ ವಲಯಗಳಿವೆ. ದಾಸರಹಳ್ಳಿಯಲ್ಲಿ ಯಾವುದೇ ಕಂಟೈನ್‍ಮೆಂಟ್ ವಲಯಗಳಿಲ್ಲ.







