ಯುಜಿಸಿ-ಎನ್‍ಇಟಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಖಂಡನೆ
ಬೆಂಗಳೂರು, ಡಿ.28: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ನಡೆಸಿದ ಯುಜಿಸಿ-ಎನ್‍ಇಟಿ ಕನ್ನಡ ಐಚ್ಛಿಕ ಭಾಷೆಯ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳನ್ನು ನೀಡಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಖಂಡಿಸಿದೆ.
ರಾಜ್ಯದಾದ್ಯಂತ ನೂರಾರು ವಿದ್ಯಾರ್ಥಿಗಳು ಹಲವು ದಿನಗಳಿಂದ ಪರೀಕ್ಷೆ ತಯಾರಿ ಮಾಡಿಕೊಂಡಿರುತ್ತಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಲೋಪದಿಂದ ಕನ್ನಡದ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ 10 ಪ್ರಶ್ನೆಗಳು ಮಾತ್ರ ಕನ್ನಡದಲ್ಲಿದ್ದವು. ಉಳಿದ 90 ಪ್ರಶ್ನೆಗಳು ಹಿಂದಿ ಭಾಷೆಯಲ್ಲಿರುವುದನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಪ್ರಮಾದಗಳನ್ನು ಮುಂದೆಂದೂ ಆಗದಂತೆ ಯುಜಿಸಿ-ಎನ್‍ಇಟಿ ಸಂಸ್ಥೆ ಅಗತ್ಯ ಕ್ರಮ ವಹಿಸಬೇಕೆಂದು ಪ್ರಾಧಿಕಾರ ಒತ್ತಾಯಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಕನ್ನಡ ಐಚ್ಛಿಕ ಭಾಷೆಯ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಿ ಎಲ್ಲ ಕನ್ನಡದ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ವಿದ್ಯಾರ್ಥಿಗಳಿಗೆ ಆದಂತಹ ತೊಂದರೆಯನ್ನು ಖಂಡಿಸುತ್ತದೆ. ಎಂದಿಗೂ ಪ್ರಾಧಿಕಾರ ಕನ್ನಡದ ವಿದ್ಯಾರ್ಥಿಗಳ ಪರವಾಗಿ ಇರುತ್ತದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ.
ಕೇಂದ್ರ ಸರಕಾರಕ್ಕೆ ಪತ್ರ: ಡಿ.26ರಂದು ನಡೆದ ಯುಜಿಸಿ-ಎನ್‍ಇಟಿ ಕನ್ನಡ ಐಚ್ಛಿಕ ಭಾಷೆಯ ಪ್ರಶ್ನೆ ಪತ್ರಿಕೆಯ 100 ಪ್ರಶ್ನೆಗಳಲ್ಲಿ ಆರಂಭದ 10 ಪ್ರಶ್ನೆಗಳು ಕನ್ನಡದಲ್ಲಿದ್ದು ನಂತರದ 90 ಪ್ರಶ್ನೆಗಳು ಹಿಂದಿ ಭಾಷೆಯಲ್ಲಿ ಬಂದಿರುವುದು ಔದ್ಯೋಗಿಕ ಭವಿಷ್ಯಕ್ಕಾಗಿ ಪರೀಕ್ಷೆ ಬರೆದ ಸಾವಿರಾರು ವಿದ್ಯಾರ್ಥಿಗಳಿಗೆ ನಿರಾಸೆಯನ್ನುಂಟು ಮಾಡಿದೆ.
ಈ ತರಹದ ಭಾಷೆ ಕುಹುಕಿನ ಕೆಲಸವನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿ, ಅದನ್ನು ತೀವ್ರವಾಗಿ ಖಂಡಿಸುತ್ತದೆ. ಇದು ಕೇವಲ ಯುಜಿಸಿ-ಎನ್‍ಇಟಿ ಸಂಸ್ಥೆಯ ತಾಂತ್ರಿಕ ಲೋಪವಾಗಿರದೆ ದುರುದ್ದೇಶಪೂರಿತ ಭಾಷೆ ಸಾಮರಸ್ಯವನ್ನು ಹಾಳು ಮಾಡುವ ಅಧಿಕಾರಿಗಳ ದಿವ್ಯನಿರ್ಲಕ್ಷ್ಯವಾಗಿರುತ್ತದೆ. ಅವರ ಬೇಜವಬ್ದಾರಿಯಿಂದಾಗಿ ಕನ್ನಡದ ಸಾವಿರಾರು ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ.
ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಹಲವು ದಿನಗಳಿಂದ ಪರೀಕ್ಷೆ ತಯಾರಿ ಮಾಡಿಕೊಂಡಿದ್ದರು. ಆದರೆ ಯುಜಿಸಿ-ಎನ್‍ಇಟಿ ಸಂಸ್ಥೆಯ ಬೇಜವಬ್ದಾರಿತನದಿಂದಾಗಿ ವಿದ್ಯಾರ್ಥಿಗಳ ಓದಿನ ಜೊತೆಗೆ ಅವರ ಭವಿಷ್ಯವು ಮಂಕಾಗಿದೆ. ಆದುದರಿಂದ, ಈ ಬಗ್ಗೆ ಪರಿಶೀಲಿಸಿ ಸದರಿ ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸುವಂತೆ ಹಾಗೂ ಸಂಬಂಧಪಟ್ಟ ಅಧಿಕಾರಿ/ನೌಕರರ ಮೇಲೆ ನಿಯಮಾನುಸಾರ ಕ್ರಮ ಜರುಗಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.







