ಆ್ಯಶಸ್ ಸರಣಿಯನ್ನು ಉಳಿಸಿಕೊಂಡ ಆಸ್ಟ್ರೇಲಿಯ

photo:PTI
ಮೆಲ್ಬರ್ನ್, ಡಿ. 28: ಚೊಚ್ಚಲ ಪಂದ್ಯವನ್ನು ಆಡುತ್ತಿರುವ ಬೌಲರ್ ಸ್ಕಾಟ್ ಬೊಲಾಂಡ್ರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಆ್ಯಶಸ್ ಸರಣಿಯ ಮೂರನೇ ಪಂದ್ಯವನ್ನು ಆಸ್ಟ್ರೇಲಿಯವು ಕೇವಲ ಮೂರು ದಿನಗಳಲ್ಲಿ ಮಂಗಳವಾರ ಇನಿಂಗ್ಸ್ ಮತ್ತು 14 ರನ್ಗಳ ಅಂತರದಿಂದ ಗೆದ್ದಿದೆ. ಪಂದ್ಯದ ಮೂರನೇ ದಿನವಾದ ಮಂಗಳವಾರ ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್ನಲ್ಲಿ ಕೇವಲ 68 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಇದರೊಂದಿಗೆ ಇನ್ನೂ ಎರಡು ಪಂದ್ಯಗಳನ್ನು ಆಡಲು ಬಾಕಿಯಿರುವಂತೆಯೇ ಆಸ್ಟ್ರೇಲಿಯವು ಆ್ಯಶಸ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಇಂಗ್ಲೆಂಡ್ ಮಂಗಳವಾರ 4 ವಿಕೆಟ್ಗಳ ನಷ್ಟಕ್ಕೆ 31 ರನ್ ಇದ್ದಲ್ಲಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿತು. ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮೊತ್ತ 267ನ್ನು ಸರಿಗಟ್ಟಲು ಅದಕ್ಕೆ ಇನ್ನೂ 51 ರನ್ಗಳ ಅಗತ್ಯವಿತ್ತು.
ಇಂಗ್ಲೆಂಡ್ ಇನಿಂಗ್ಸ್ನ ಭವಿಷ್ಯವು ಅದರ ನಾಯಕ ಜೋ ರೂಟ್ರನ್ನು ಅವಲಂಬಿಸಿತ್ತು. ಆದರೆ, ಅವರು 28 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಇಂಗ್ಲೆಂಡ್ ಪತನ ಸನ್ನಿಹಿತವಾಗಿತ್ತು.
ಗಾಯಾಳು ಆಟಗಾರರೊಬ್ಬರ ಸ್ಥಾನದಲ್ಲಿ ಮೈದಾನಕ್ಕಿಳಿದಿರುವ ಬೊಲಾಂಡ್ರನ್ನು ಅವರ ತವರು ಮೈದಾನ ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಿಯಂತ್ರಿಸಲು ಯಾವ ಇಂಗ್ಲಿಷ್ ಬ್ಯಾಟರ್ಗೂ ಸಾಧ್ಯವಾಗಲಿಲ್ಲ. ಅವರು ನಾಲ್ಕು ಓವರ್ಗಳಲ್ಲಿ ಕೇವಲ 7 ರನ್ಗಳನ್ನು ನೀಡಿ 6 ವಿಕೆಟ್ಗಳನ್ನು ಉರುಳಿಸಿದರು. 19 ಎಸೆತಗಳಲ್ಲಿ ಅತ್ಯಂತ ವೇಗದ ಐದು ವಿಕೆಟ್ಗಳ ಗೊಂಚಲು ಪಡೆದ ದಾಖಲೆಯನ್ನು ಅವರು ಈ ಮೂಲಕ ಸರಿಗಟ್ಟಿದರು.
ಇನ್ನೊಂದು ಬದಿಯಲ್ಲಿ ಮಿಚೆಲ್ ಸ್ಟಾರ್ಕ್ 29 ರನ್ಗಳನ್ನು ನೀಡಿ 3 ವಿಕೆಟ್ಗಳನ್ನು ಉರುಳಿಸಿದರು. ಅದರೊಂದಿಗೆ ಇಂಗ್ಲೆಂಡ್ ಇನಿಂಗ್ಸ್ನ ಪತನ ಸಂಪೂರ್ಣಗೊಂಡಿತು.
‘‘ಇದೊಂದು ದೊಡ್ಡ ಆಶ್ಚರ್ಯ.ಕೆಲವೇ ವಾರಗಳ ಕೌತುಕ. ನಾವು ಮಾಡಿದ್ದು ಎಲ್ಲವೂ ಯಶಸ್ವಿಯಾಯಿತು’’ ಎಂದು ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮಿನ್ಸ್ ಹೇಳಿದರು.
ಬೆನ್ ಸ್ಟೋಕ್ಸ್ ಎರಡು ರನ್ ಇದ್ದಲ್ಲಿಂದ ಮಂಗಳವಾರ ಇನಿಂಗ್ಸ್ ಮುಂದುವರಿಸಿದರು. ಆದರೆ ಅವರು 11 ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಜಾನಿ ಬೇರ್ಸ್ಟೊ 5 ರನ್ ಮಾಡಿದ ನಿರ್ಗಮಿಸಿದರು. ರೂಟ್ ಔಟಾದ ಬಳಿಕ ಇಂಗ್ಲೆಂಡ್ ಪಾಲಿಗೆ ಎಲ್ಲವೂ ಮುಗಿಯಿತು. ಬಾಲಂಗೋಚಿಗಳು ಮೈದಾನದಲ್ಲಿ ಹೆಚ್ಚು ಸಮಯ ಕಳೆಯಲಿಲ್ಲ.
ಬ್ರಿಸ್ಬೇನ್ ಮತ್ತು ಅಡಿಲೇಡ್ನಲ್ಲಿ ನಡೆದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಬೃಹತ್ ಸೋಲುಗಳನ್ನು ಅನುಭವಿಸಿತ್ತು. ಐದು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಬೇಕಾದರೆ ಈ ಪಂದ್ಯವನ್ನು ಅದು ಗೆಲ್ಲಲೇಬೇಕಾಗಿತ್ತು. ಆದರೆ, ಹಾಲಿ ಚಾಂಪಿಯನ್ ಆಗಿರುವ ನೆಲೆಯಲ್ಲಿ ಆಸ್ಟ್ರೇಲಿಯ ಆ್ಯಶಸ್ ಸರಣಿಯನ್ನು ಉಳಿಸಿಕೊಳ್ಳಲು ಈ ಪಂದ್ಯವನ್ನು ಡ್ರಾ ಮಾಡಿದರೂ ಸಾಕಾಗಿತ್ತು.
ಟಾಸ್ ಗೆದ್ದ ಆಸ್ಟ್ರೇಲಿಯ ಮೊದಲು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತ್ತು. ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ ನಲ್ಲಿ 185 ರನ್ಗಳನ್ನು ಗಳಿಸಿತ್ತು. ಬಳಿಕ ಆಸ್ಟ್ರೇಲಿಯ ತನ್ನ ಮೊದಲ ಇನಿಂಗ್ಸ್ನಲ್ಲಿ 267 ರನ್ ಗಳಿಸಿತ್ತು.
ಇಂಗ್ಲೆಂಡ್ ಪತನದ ರೂವಾರಿ ಸ್ಕಾಟ್ ಬೊಲಾಂಡ್ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.