ದಕ್ಷಿಣ ಆಫ್ರಿಕವನ್ನು 197 ರನ್ಗೆ ನಿಯಂತ್ರಿಸಿದ ಭಾರತ
132 ರನ್ ಗಳ ಮುನ್ನಡೆ

photo:PTI
ಸೆಂಚೂರಿಯನ್ (ದಕ್ಷಿಣ ಆಫ್ರಿಕ), ಡಿ. 28: ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂರನೇ ದಿನವಾದ ಮಂಗಳವಾರ ಪ್ರವಾಸಿ ಭಾರತವು ಆತಿಥೇಯ ತಂಡದ ಮೊದಲ ಇನಿಂಗ್ಸನ್ನು 197 ರನ್ಗೆ ನಿಯಂತ್ರಿಸಿದೆ. ಇದರೊಂದಿಗೆ ಭಾರತ 130 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದೆ.
ಸೆಂಚೂರಿಯನ್ನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಂಗಳವಾರ ಭಾರತೀಯ ಬೌಲರ್ಗಳು ದಕ್ಷಿಣ ಆಫ್ರಿಕದ ಬ್ಯಾಟರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದರು. ಶ್ರೇಷ್ಠ ನಿರ್ವಹಣೆ ನೀಡಿದ ಮುಹಮ್ಮದ್ ಶಮಿ ಐದು ವಿಕೆಟ್ಗಳನ್ನು ಪಡೆದರು, ಇದರೊಂದಿಗೆ ಅವರು ತನ್ನ 200ನೇ ಟೆಸ್ಟ್ ವಿಕೆಟನ್ನೂ ಪಡೆದರು.
ಶಮಿ ಹೊರತಾಗಿ ಜಸ್ಪ್ರೀತ್ ಬೂಮ್ರಾ ಮತ್ತು ಶಾರ್ದುಲ್ ಠಾಕೂರ್ ತಲಾ 2 ವಿಕೆಟ್ಗಳನ್ನು ಉರುಳಿಸಿದರು ಹಾಗೂ ಮುಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕದ ಪರ 52 ರನ್ ಗಳಿಸಿದ ಟೆಂಬ ಬವುಮ ತಂಡದ ಗರಿಷ್ಠ ಸ್ಕೋರ್ದಾರರಾದರು. ನಾಯಕ ಹಾಗೂ ಆರಂಭಿಕ ಆಟಗಾರ ಡೀನ್ ಎಲ್ಗರ್ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದಾಗ ದಕ್ಷಿಣ ಆಫ್ರಿಕ ಪಾಳಯದಲ್ಲಿ ನಿರಾಶೆ ಮೂಡಿತು. ಇನ್ನೋರ್ವ ಆರಂಭಿಕ ಏಡನ್ ಮರ್ಕ್ರಾಮ್ (13) ಮತ್ತು ಕೀಗನ್ ಪೀಟರ್ಸನ್ (15) ಕೂಡ ಬೇಗನೆ ನಿರ್ಗಮಿಸಿದರು.
ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ 34 ರನ್ಗಳ ಅಮೂಲ್ಯ ದೇಣಿಗೆ ನೀಡಿದರು. ಕೆಳ ಕ್ರಮಾಂಕದಲ್ಲಿ ಮಾರ್ಕೊ ಜಾನ್ಸನ್ (19), ಕಗಿಸೊ ರಬಡ (25) ಮತ್ತು ಕೇಶವ ಮಹಾರಾಜ್ ತಂಡಕ್ಕೆ ಕೊಂಚವಾದರೂ ಆಶ್ರಯ ನೀಡಿದರು.
ಇದಕ್ಕೂ ಮೊದಲು ಭಾರತವು ತನ್ನ ಮೊದಲ ಇನಿಂಗ್ಸನ್ನು 327 ರನ್ಗಳಿಗೆ ಮುಕ್ತಾಯಗೊಳಿಸಿತು.
ಮೂರು ವಿಕೆಟ್ಗಳ ನಷ್ಟಕ್ಕೆ 272 ರನ್ ಇದ್ದಲ್ಲಿಂದ ಮಂಗಳವಾರ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತವು ಅಂತಿಮವಾಗಿ 327 ರನ್ಗಳಿಗೆ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ರವಿವಾರ ಶತಕ ಬಾರಿಸಿದ್ದ ಕೆ.ಎಲ್ ರಾಹುಲ್ (123) ಇಂದು ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲಲಿಲ್ಲ. ತನ್ನ ಹಿಂದಿನ ದಿನದ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ನಿರ್ಗಮಿಸಿದರು. ಹಿಂದಿನ ದಿನ 40 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದಿದ್ದ ಅಜಿಂಕ್ಯ ರಹಾನೆ (48) ಇಂದು ಕೇವಲ 8 ರನ್ ಸೇರಿಸಿ ನಿರ್ಗಮಿಸಿದರು. ಅಂತಿಮವಾಗಿ ಜಸ್ಪ್ರೀತ್ ಬೂಮ್ರಾ 14 ರನ್ಗಳ ದೇಣಿಗೆಯನ್ನು ನೀಡಿದರು.
ಮಂಗಳವಾರ ಭಾರತೀಯ ತಂಡವು 55 ರನ್ಗಳನ್ನು ಗಳಿಸುವಷ್ಟರಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡಿತು.
ಲುಂಗಿ ಎಂಗಿಡಿ 71 ರನ್ಗಳನ್ನು ನೀಡಿ 6 ವಿಕೆಟ್ಗಳನ್ನು ಉರುಳಿಸಿದರು. ಕಗಿಸೊ ರಬಡ ಮೂರು ವಿಕೆಟ್ಗಳನ್ನು ಪಡೆದರೆ, ಮಾರ್ಕೊ ಜಾನ್ಸನ್ ಒಂದು ವಿಕೆಟ್ ಗಳಿಸಿದರು.
ದಿನದಾಟದ ಮುಕ್ತಾಯದ ವೇಳೆಗೆ ಭಾರತವು ತನ್ನ ದ್ವಿತೀಯ ಇನಿಂಗ್ಸ್ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 2 ರನ್ಗಳನ್ನು ಗಳಿಸಿದೆ. ಇದರೊಂದಿಗೆ ಅದು ಒಟ್ಟಾರೆ 132 ರನ್ಗಳ ಮುನ್ನಡೆಯನ್ನು ಹೊಂದಿದೆ.
ಕೆ.ಎಲ್. ರಾಹುಲ್ (1) ಮತ್ತು ಮಯಾಂಕ್ ಅಗರ್ವಾಲ್ (0) ಕ್ರೀಸ್ನಲ್ಲಿದ್ದಾರೆ.
ಪಂದ್ಯದ ಎರಡನೇ ದಿನವಾದ ಸೋಮವಾರದ ಆಟವು ಮಳೆಯಿಂದಾಗಿ ಸಂಪೂರ್ಣವಾಗಿ ರದ್ದಾಗಿತ್ತು.
200 ಟೆಸ್ಟ್ ವಿಕೆಟ್ಗಳ ಸರದಾರ ಶಮಿ
ಭಾರತಕ್ಕೆ 130 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಒದಗಿಸುವಲ್ಲಿ ಬೌಲರ್ ಮುಹಮ್ಮದ್ ಶಮಿ ಪ್ರಧಾನ ಪಾತ್ರ ವಹಿಸಿದರು. ಅವರು ಪಂದ್ಯದ ಮೂರನೇ ದಿನವಾದ ಮಂಗಳವಾರ ದಕ್ಷಿಣ ಆಫ್ರಿಕದ ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ಗಳ ಗೊಂಚಿಲನ್ನು ಪಡೆದರು. ಕಗಿಸೊ ರಬಡ ವಿಕೆಟನ್ನು ಪಡೆಯುವುದರೊಂದಿಗೆ ಶಮಿ ತನ್ನ ಐದು ವಿಕೆಟ್ಗಳ ಗೊಂಚಿಲನ್ನು ಪೂರ್ಣಗೊಳಿಸಿದರು. ಅದೇ ವೇಳೆ, ಈ ವಿಕೆಟ್ ಅವರ 200ನೇ ಟೆಸ್ಟ್ ವಿಕೆಟ್ ಕೂಡ ಆಯಿತು. ಶಮಿ ಈ ಸಾಧನೆಯನ್ನು ತನ್ನ 55ನೇ ಟೆಸ್ಟ್ ನಲ್ಲಿ ಮಾಡಿದರು. ಕಪಿಲ್ ದೇವ್ 50 ಟೆಸ್ಟ್ಗಳಲ್ಲಿ 200 ವಿಕೆಟ್ಗಳನ್ನು ಪಡೆದರೆ, ಜಾವಗಲ್ ಶ್ರೀನಾಥ್ 54 ಟೆಸ್ಟ್ಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ದಾಖಲೆ ನಿರ್ಮಾಣದ ವೇಗದಲ್ಲಿ ಮೂರನೇ ಸ್ಥಾನದಲ್ಲಿ ಶಮಿ ಇದ್ದಾರೆ.