ತೀರ್ಥಹಳ್ಳಿ: ಶಾಲಾವರಣದಲ್ಲಿದ್ದ ಗಾಂಧೀಜಿ, ವಿವೇಕಾನಂದರ ವಿಗ್ರಹ ಧ್ವಂಸ; ಆರೋಪಿಯ ಬಂಧನ

ತೀರ್ಥಹಳ್ಳಿ, ಡಿ.29: ತಾಲೂಕಿನ ಹಾರೊಗೊಳಿಗೆ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ಧ್ವಂಸ ಮಾಡಿ ಶಾಲಾ ಕೈತೋಟವನ್ನು ನಾಶಪಡಿಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ಗೋವಿಂದ ಬಂಧಿತ ಆರೋಪಿಯಾಗಿದ್ದಾನೆ.
ಘಟನೆ ವಿವರ: ಗೋವಿಂದ ಹಾರೊಗೊಳಿಗೆ ಭಾಗದಲ್ಲಿ ಅಡಿಕೆ ಆರಿಸುವ ಕೆಲಸ ಮಾಡುತ್ತಿದ್ದ. ಈತ ಶನಿವಾರ ಅತಿಯಾದ ಮದ್ಯಪಾನ ಮಾಡಿ ಶಾಲೆಗೆ ತೆರಳಿ ಕುಡಿಯಲು ನೀರು ಕೇಳಿದ್ದನೆನ್ನಲಾಗಿದೆ. ಅಲ್ಲಿನ ಶಿಕ್ಷಕಿ ನೀರು ಕೊಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಆತ ರವಿವಾರ ರಾತ್ರಿ ಶಾಲಾವರಣಕ್ಕೆ ನುಗ್ಗಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಹಾರೊಗೊಳಿಗೆ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಕೈತೋಟ, ಸರಸ್ವತಿ ದೇವಿ, ಮಹಾತ್ಮ ಗಾಂಧೀಜಿ ಮತ್ತು ವಿವೇಕಾನಂದರ ವಿಗ್ರಹಗಳನ್ನುನೀಡಿದ್ದರು. ಅದೀಗ ಕುಡುಕನ ಅಟ್ಟಹಾಸಕ್ಕೆ ಧ್ವಂಸಗೊಂಡಿದೆ.
ಆರೋಪಿ ವಿರುದ್ಧ ಗ್ರಾಪಂ ಮತ್ತು ಶಾಲಾಡಳಿತ ಸಮಿತಿಯು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಹಾರೋಗೋಳಿಗೆಯಲ್ಲಿ ಕಾರು ಹಾನಿ: ಕಳೆದ ಕೆಲವು ದಿನಗಳಿಂದ ಹಾರೋಗೋಳಿಗೆ ಭಾಗದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ರವಿವಾರ ಯುವಕರ ಗಲಾಟೆಯಲ್ಲಿ ಓರ್ವನ ಕಾರನ್ನು ಪುಡಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.






.gif)
.gif)
.gif)
.gif)

