ಉತ್ತರ ಪ್ರದೇಶ ಉನ್ನತ ಶಿಕ್ಷಣ ಆಯೋಗ ವೆಬ್ಸೈಟ್ನಲ್ಲಿ ಖ್ಯಾತ ಕವಿ ಅಕ್ಬರ್ ಅಲಹಾಬಾದಿ ಇದೀಗ ಅಕ್ಬರ್ ಪ್ರಯಾಗರಾಜ್!

Photo: sahapedia.org
ಹೊಸದಿಲ್ಲಿ: ಖ್ಯಾತ ಉರ್ದು ಕವಿ ಅಕ್ಬರ್ ಅಲಹಾಬಾದಿ ಈಗ ಉತ್ತರ ಪ್ರದೇಶ ಉನ್ನತ ಶಿಕ್ಷಣ ಸೇವೆಗಳ ಆಯೋಗದ ಪ್ರಕಾರ ಅಕ್ಬರ್ ಪ್ರಯಾಗರಾಜ್ ಆಗಿದ್ದಾರೆ. ಉತ್ತರ ಪ್ರದೇಶ ಸರಕಾರದ ಅಧೀನದಲ್ಲಿ ಕಾರ್ಯಾಚರಿಸುವ ಈ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಉರ್ದು ಕವಿ, ಅಕ್ಬರ್ ಅಲಹಾಬಾದಿ ಎಂದೇ ಜನಜನಿತರಾಗಿರುವ ಸಯ್ಯದ್ ಅಕ್ಬರ್ ಹುಸೈನ್ ಅವರನ್ನು ಅಕ್ಬರ್ ಪ್ರಯಾಗರಾಜ್ ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣಿಗರು ಇದನ್ನು ಗಮನಿಸಿ ಆಯೋಗದ ವಿರುದ್ಧ ಟೀಕೆಗಳ ಸುರಿಮಳೆ ಹರಿಸಿದ್ದಾರೆ.
ವೆಬ್ತಾಣದ 'ಅಬೌಟ್ ಅಲಹಾಬಾದ್' ಅಥವಾ ಅಲಹಾಬಾದ್ ಕುರಿತು ವಿಭಾಗದಲ್ಲಿ ನಗರದ ಕವಿಗಳು ಮತ್ತು ಲೇಖರ ಕುರಿತು ಉಲ್ಲೇಖಿಸುವಾಗ "ಅಕ್ಬರ್ ಪ್ರಯಾಗರಾಜ್ ಅವರೊಬ್ಬ ಖ್ಯಾತ ಆಧುನಿಕ ಉರ್ದು ಕವಿ" ಎಂದು ಬರೆಯಲಾಗಿದೆ. ಅಕ್ಬರ್ ಅಲಹಾಬಾದಿ ಅಲ್ಲದೆ ತಮ್ಮ ಹೆಸರಿಗೆ ಅಲಹಾಬಾದಿ ಉಪನಾಮೆ ಹೊಂದಿರುವ ಎಲ್ಲಾ ಇತರ ಲೇಖಕರು ಮತ್ತು ಕವಿಗಳ ಹೆಸರಿಗೆ ಅಲಹಾಬಾದ್ ಬದಲು ಪ್ರಯಾಗರಾಜ್ ಎಂದು ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಅಕ್ಬರ್ ಅಲಹಾಬಾದಿ ಹೊರತಾಗಿ ರಶೀದ್ ಅಲಹಾಬಾದಿ, ತೇಘ್ ಅಲಹಾಬಾದಿ ಅವರ ಹೆಸರುಗಳೂ ತೇಘ್ ಪ್ರಯಾಗರಾಜ್, ರಶೀದ್ ಪ್ರಯಾಗರಾಜ್ ಆಗಿವೆ.
ರಾಜ್ಯದ ಆದಿತ್ಯನಾಥ್ ಸರಕಾರ ಅಲಹಾಬಾದ್ ಜಿಲ್ಲೆಯನ್ನು 2018ರಲ್ಲಿ ಪ್ರಯಾಗರಾಜ್ ಎಂದು ಮರುನಾಮಕರಣಗೊಳಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ಆಯೋಗದ ವೆಬ್ ತಾಣದಲ್ಲಿ ಕವಿಗಳ ಹೆಸರುಗಳ ಜತೆಗಿದ್ದ ಅಲಹಾಬಾದಿ ಹೆಸರನ್ನು ಕೂಡ ಪ್ರಯಾಗರಾಜ್ ಎಂದು ಬದಲಿಸಿದ್ದ ಆಯೋಗದ ಕ್ರಮವನ್ನು ಕೆಲವರು ಮೂರ್ಖತನದ ಪರಮಾವಧಿ ಎಂದು ಬಣ್ಣಿಸಿದ್ದರೆ ಇನ್ನು ಕೆಲವರು ಇದು ಇತಿಹಾಸವನ್ನು ಮರುರಚಿಸುವ ಯತ್ನ ಎಂದು ಬರೆದಿದ್ದಾರೆ.





