ನೆಕ್ಕಿಲಾಡಿಯಲ್ಲಿ ಜ.2ರಂದು 'ಮಸ್ಜಿದ್ ದರ್ಶನ್': ಸಾರ್ವಜನಿಕರಿಗೆ ಮಸೀದಿ ನೋಡುವ ಅವಕಾಶ
ಉಪ್ಪಿನಂಗಡಿ, ಡಿ.29: ಧರ್ಮಗಳ ಬಗ್ಗೆ ಪರಸ್ಪರ ಅರಿಯುವ, ತಿಳಿಯುವ ಪ್ರಯತ್ನ ನಡೆಯಬೇಕೆನ್ನುವ ಉದ್ದೇಶದಿಂದ ನಡೆಯುವ ‘ನಮ್ಮೂರ ಮಸೀದಿ ನೋಡ ಬನ್ನಿ!!’ ಕಾರ್ಯಕ್ರಮದಂಗವಾಗಿ ಸಾರ್ವಜನಿಕ ‘ಮಸ್ಜಿದ್ ದರ್ಶನ್’ ಕಾರ್ಯಕ್ರಮ ಜ.2ರಂದು 34 ನೆಕ್ಕಿಲಾಡಿಯ ಗ್ರಾಪಂ ಬಳಿಯಿರುವ ಮಸ್ಜಿದುಲ್ ಹುದಾದಲ್ಲಿ ನಡೆಯಲಿದೆ ಎಂದು ಮಸ್ಜಿದುಲ್ ಹುದಾ ಕಮಿಟಿಯ ಕಾರ್ಯದರ್ಶಿ ಜಲೀಲ್ ಮುಕ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 9:30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಂಡು ಸಂಜೆ 6:30ರ ತನಕ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಸ್ಜಿದುಲ್ ಹುದಾದ ಗೌರವಾಧ್ಯಕ್ಷ ಡಾ.ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಲಿದ್ದಾರೆ.
ತೊಕ್ಕೊಟ್ಟು ಮಸ್ಜಿದುಲ್ ಹುದಾದ ಖತೀಬ್ ಮುಹಮ್ಮದ್ ಕುಂಞಿ ಮಸೀದಿಯ ಪರಿಚಯ ಮಾಡಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ಫಾ.ಅಬೆಲ್ ಲೋಬೋ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ಆಡಳಿತ ಮೊಕ್ತೇಸರ ಗಣೇಶ್ ಶೆಣೈ ಸೇರಿದಂತೆ ಸಮಾಜದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇಂದಿನ ಸಮಾಜದಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಹಾಗೂ ಅವರ ಆರಾಧನಾ ಸ್ಥಳಗಳ ಬಗಗೆ ಅನಗತ್ಯ ಸಂಶಯಗಳನ್ನು ಹುಟ್ಟು ಹಾಕಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸಮಾಜದ ಬಾಂಧವರಿಗೆ ಸರಿಯಾದ ಪರಿಚಯವನ್ನು ಮಾಡಬೇಕಾಗಿರುವುದರಿಂದ 34 ನೆಕ್ಕಿಲಾಡಿಯ ಮಸ್ಜಿದುಲ್ ಹುದಾ ಆಡಳಿತ ಸಮಿತಿಯ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮಾಜದ ಎಲ್ಲಾ ಬಾಂಧವರಿಗೂ ಇದರಲ್ಲಿ ಭಾಗವಹಿಸಲು ಅವಕಾಶವಿದ್ದು, ಇದರಲ್ಲಿ ಪಾಲ್ಗೊಂಡು ಮಸೀದಿಯೊಳಗಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸುವ ಅವಕಾಶವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ 34 ನೆಕ್ಕಿಲಾಡಿಯ ಮಸ್ಜಿದುಲ್ ಹುದಾ ಕಮಿಟಿಯ ಅಧ್ಯಕ್ಷ ಇಲ್ಯಾಸ್ ಯು.ಕೆ., ಮಸ್ಜಿದ್ ದರ್ಶನ್ ಕಾರ್ಯಕ್ರಮ ಸಮಿತಿಯ ಸಂಚಾಲಕ ಅಮೀನ್ ಅಹ್ಸನ್, ಉಪ್ಪಿನಂಗಡಿ ಜಮಾಅತೆ ಇಸ್ಲಾಮೀ ಹಿಂದ್‌ನ ಅಧ್ಯಕ್ಷ ಅಬ್ದುಲ್ ಹಸೀಬ್ ಉಪಸ್ಥಿತರಿದ್ದರು.







