ಬೀದಿ ಬದಿ ವ್ಯಾಪಾರಿಗಳ ಬದುಕು ಬೀದಿಪಾಲು ಮಾಡದಿರಿ: ದಿವಾಕರ್ ರಾವ್ ಬೋಳೂರು
ಮಂಗಳೂರು : ಬೀದಿ ಬದಿ ವ್ಯಾಪಾರಿಗಳ ಬದುಕು ಬೀದಿಪಾಲು ಮಾಡದಿರಿ ಎಂದು ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (FITU) ಇದರ ರಾಜ್ಯ ಉಪಾಧ್ಯಕ್ಷ ಎಂ. ದಿವಾಕರ್ ರಾವ್ ಬೋಳೂರು ಮನವಿ ಮಾಡಿದ್ದಾರೆ.
ಮಹಾ ನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆಯ ಆಯುಕ್ತರಿಂದ ಮುಂಚಿತವಾಗಿಯೇ ಯಾವುದೇ ನೋಟೀಸು ಜಾರಿಯಾದ ಬಗ್ಗೆ ನಮಗೆ ತಿಳಿದಿಲ್ಲ ಒಂದೊಮ್ಮೆ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾಗಿರುವ ಬೀದಿ ಬದಿ ವ್ಯಾಪಾರಿಗಳು ಅನಧಿಕೃತವಾಗಿದ್ದರೂ ಅಂತಹವರನ್ನೂ ಪೂರ್ವ ಸೂಚನೆಯನ್ನೂ ನೀಡದೆ ಒದ್ದೋಡಿಸಿ ದುಡಿಯುವ ಬಡಜನರು ಕಷ್ಟದಿಂದ ಸಂಪಾದಿಸಲು ಸರಕು ಸಾಗಣೆ ಮಾಡುವ ಗಾಡಿಗಳನ್ನಾಗಲೀ, ಮರದ ಅಥವಾ ಕಬ್ಬಿಣದ, ಹರುಕುಮುರುಕು ಮಳಿಗೆಗಳನ್ನಾಗಲೀ ಧ್ವಂಸಗೊಳಿಸುವುದು ಅಕ್ಷಮ್ಯ. ಇನ್ನು ಅವರಲ್ಲಿ ಯಾರಾದರೂ ಅಧಿಕೃತವಾಗಿ ಪಾಲಿಕೆಯಿಂದ ಯಾವುದೇ ರೀತಿಯ ಅನುಮತಿ, ಪರವಾನಿಗೆ ಹೊಂದಿದ್ದಲ್ಲಿ ಅಷ್ಟೊಂದು ವ್ಯಾಪಾರಿ ಕಾರ್ಮಿಕರಿಗೆ ಪಾಲಿಕೆಯ ವತಿಯಿಂದ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ದಿವಾಕರ್ ರಾವ್ ಬೋಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ನಗರವನ್ನು ಸಂಬಂಧಿಸಿದಂತೆ ಕೇಂದ್ರ ಸರಕಾರದ ಮುಂದಿರುವ ಸ್ಮಾರ್ಟ್ ಸಿಟಿ ಯೋಜನೆ ಇತ್ಯಾದಿ ಅಭಿವೃದ್ಧಿ ಕಾರ್ಯಗಳ ಯಶಸ್ವಿಗೆಬೇಕಾಗಿ, ಬೀದಿ ಬದಿ ವ್ಯಾಪಾರಿಗಳು ಕೂಡಾ ಪಾಲಿಕೆಯ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು, ತಾವು ಅವರ ಅದೇಶಗಳಿಗೆ ಸಹಕರಿಸಿಕೊಳ್ಳುವಂತೆ ಮನವಿ ಮಾಡಿದರು.
ಸರಕಾರ ಬೀದಿಬದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸಿ ಅವರ ಬದುಕನ್ನು ಬೀದಿಪಾಲು ಮಾಡುವಂತಹ ಕ್ರಮವನ್ನು ಖಂಡಿಸುವೆವು ಮತ್ತು ಅವರಿಗೆ ತಕ್ಷಣ ಬೇರೆ ಜಾಗಗಳಲ್ಲಿ ವ್ಯಾಪಾರಕ್ಕೆ ಅವಕಾಶ ಅಥವಾ ನ್ಯಾಯಯುತ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.
ಈ ಸಂದರ್ಭ ಎಫ್.ಐ.ಟಿ.ಯು. ಕಾರ್ಮಿಕ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಗೋಪಾಲ ಉಪಸ್ಥಿತರಿದ್ದರು.







