ಮದ್ರಸಗಳ, ಎಸೆಸೆಲ್ಸಿ ಪರೀಕ್ಷೆಗಳು ಏಕಕಾಲದಲ್ಲಿ ನಡೆಯದಂತೆ ಕ್ರಮ ವಹಿಸಲು ದ.ಕ. ಡಿಸಿ ಸೂಚನೆ
ಮಂಗಳೂರು, ಡಿ.29: ಮದ್ರಸ ಶಿಕ್ಷಣ ಕ್ರಮಗಳು ಮತ್ತು ಮದ್ರಸಗಳ ವಾರ್ಷಿಕ ಹಾಗೂ ಎಸೆಸೆಲ್ಸಿ ಪರೀಕ್ಷೆಗಳು ಏಕಕಾಲದಲ್ಲಿ ನಡೆಯದಂತೆ ವೇಳಾಪಟ್ಟಿ ಸಿದ್ದಪಡಿಸಬೇಕು. ಅಲ್ಲದೆ ಮದ್ರಸಗಳ ಆಧುನೀಕರಣ ಯೋಜನೆಯ ಪ್ರಯೋಜನ ಪಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತ ಸಮುದಾಯದ ಯುವಕ ಹಾಗೂ ಯುವತಿಯರಿಗೆ ಕೌಶಲ ಅಭಿವೃದ್ಧಿ ಯೋಜನೆಯ ಲಾಭ ಪಡೆಯಲು ವ್ಯಾಪಕ ವಾಗಿ ಪ್ರಚಾರ ಮಾಡಬೇಕು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಲ್ಲಿ ಜಾರಿಯಲ್ಲಿರುವ ಶೈಕ್ಷಣಿಕ ಹಾಗೂ ಇತರೆ ಸಾಲ ಸೌಲಭ್ಯಗಳ ಪ್ರಯೋಜನಾ ಪಡೆಯುವಂತೆ ಹಾಗೂ ಈಗಾಗಲೇ ಸಾಲ ಪಡೆದಿರುವವರು ನಿಗದಿತ ಅವಧಿಯೊಳಗೆ ಮರುಪಾವತಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಂಜನಪ್ಪರಿಗೆ ಸೂಚಿಸಿದರು.
ಕೋವಿಡ್ ಲಸಿಕೆಯ ಉಪಯುಕ್ತತೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಬಗ್ಗೆ ಪ್ರಚಾರ ಕೈಗೊಳ್ಳುವಂತೆಯೂ ಡಿಸಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.





