ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ ರಾಜೀನಾಮೆ

ಉಡುಪಿ, ಡಿ.29: ಬಿಜೆಪಿ ಹಿರಿಯ ನಾಯಕರ ಸೂಚನೆಯಂತೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕೆ.ರಾಘವೇಂದ್ರ ಕಿಣಿ ಬುಧವಾರ ರಾಜೀನಾಮೆ ನೀಡಿದ್ದಾರೆ.
ಪ್ರಾಧಿಕಾರದ ಮೂರು ವರ್ಷಗಳ ಅವಧಿಯಲ್ಲಿ ಒಂದೂವರೆ ವರ್ಷಗಳ ಮಟ್ಟಿಗೆ ಪಕ್ಷ ನನಗೆ ಈ ಜವಾಬ್ದಾರಿ ನೀಡಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತ ನಾಗಿ ನಾನು ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಪಕ್ಷದ ಸೂಚನೆಯಂತೆ ನಾನು ಇದೀಗ ಅಧಿಕಾರವನ್ನು ಬಿಡುತಿದ್ದು, ಬೇರೆಯವರಿಗೆ ಅವಕಾಶ ಮಾಡಿಕೊಡುತಿದ್ದೇನೆ ಎಂದವರು ಪತ್ರಕರ್ತರಿಗೆ ಹಠಾತ್ ರಾಜೀನಾಮೆಗೆ ಕಾರಣ ವಿವರಿಸುತ್ತಾ ತಿಳಿಸಿದರು.
ಈಗಾಗಲೇ ನೂತನ ಅಧ್ಯಕ್ಷರ ಆಯ್ಕೆ ಆಗಿದ್ದು, ಇನ್ನು ಮೂರು-ನಾಲ್ಕು ದಿನಗಳಲ್ಲಿ ಅಧಿಕೃತವಾಗಿ ಅಧಿಕಾರ ಹಸ್ತಾಂತರ ಆಗಲಿದೆ. ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿರುವ ಮಾಹಿತಿಯನ್ನು ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.
ತನ್ನ ಅಲ್ಪಕಾಲದ ಅಧಿಕಾರಾವಧಿಯಲ್ಲಿ ಪ್ರಾಧಿಕಾರಕ್ಕೆ ಕಾಯಕಲ್ಪ ನೀಡಲು ಪ್ರಯತ್ನಿಸಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಹೊಸತನವನ್ನು ನೀಡಿ ಪಾರದರ್ಶಕತೆಯಿಂದ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಆಡಳಿತ ನಿರ್ವಹಿಸಿರುವ ತೃಪ್ತಿ ಇದೆ ಎಂದರು.








