ಬೆಂಗಳೂರು: ಹಿಂದೂ-ಮುಸ್ಲಿಮ್ ಭಾವೈಕ್ಯತೆ, ಸಾಂಸ್ಕೃತಿಕ ಹಿರಿಮೆ ಸಾರಿದ ನೆಲದ ಪದ ದೇಶಿ ಉತ್ಸವ
ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬದ ನೆನಪಿನ ಕಾರ್ಯಕ್ರಮ

ಬೆಂಗಳೂರು, ಡಿ. 29: ರಾಷ್ಟ್ರಕವಿ ಕುವೆಂಪು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ(ಕೆವಿಎಸ್) ಆಯೋಜಿಸಿದ್ದ ‘ನೆಲದ ಪದ’ ದೇಸಿ ಯುವ ಸಾಂಸದಕೃತಿಕ ಉತ್ಸವ ‘ಹಿಂದೂ-ಮುಸ್ಲಿಂ’ ಭಾವೈಕ್ಯತೆ ಮತ್ತು ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಸಾರುವಲ್ಲಿ ಯಶಸ್ವಿಯಾಯಿತು.
ಬುಧವಾರ ಇಲ್ಲಿನ ಮಾಗಡಿ ಮುಖ್ಯರಸ್ತೆ ಅಂಜನಾನಗರದಲ್ಲಿನ ಸ್ಫೂರ್ತಿಧಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ, ಸ್ಫೂರ್ತಿಧಾಮ ಅಧ್ಯಕ್ಷರೂ ಆಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಮರಿಸ್ವಾಮಿ, ಗಾಯಕಿ ಎಂ.ಡಿ ಪಲ್ಲವಿ, ಯುವ ನಿರ್ದೇಶಕರಾದ ಮಂಸೋರೆ, ಬಿ.ಎಂ.ಗಿರಿರಾಜ್, ಸರೋವರ್ ಬೆಂಕಿಕೆರೆ ಚಾಲನೆ ನೀಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯಿಂದ, ಬುದ್ಧನ ಪ್ರತಿಮೆಯವರೆಗೂ ಕಲಾತಂಡಗಳ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು. ವೀರ ವನಿತೆ ಒನಕೆ ಓಬವ್ವ ಕಹಳೆ ವಾದನ ಕಲಾವಿದರು ಮೆರವಣಿಗೆ ಮುನ್ನಡೆಸಿದರು. ಮೆರವಣಿಗೆಯುದ್ದಕ್ಕೂ ಕೊಂಬು, ಕಹಳೆ, ತಮಟೆ ಸದ್ದು ನಾಡಿನ ಸಾಂಸ್ಕೃತಿಕ ಹಿರಿಮೆ-ಹೆಗ್ಗಳಿಕೆಯನ್ನು ಪ್ರತಿಧ್ವನಿಸಿದವು.
ಆ ಬಳಿಕ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ, ಜನಪದ ಪ್ರದರ್ಶನ ಕಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಹಂಸಲೇಖ ದೇಶಿ ಸಂಸ್ಥೆ ಜನಪದ ಸಂಗೀತ, ಪ್ರದರ್ಶನ ಕಲೆಗಳನ್ನು ತಾಳ, ಶಾಸ್ತ್ರ ಮತ್ತು ಶೃತಿ ಬದ್ಧತೆಯಿಂದ ನುಡಿಸಲು ಮತ್ತು ಪ್ರದರ್ಶನಕ್ಕೆ ತರಬೇತಿ ಕಾರ್ಯಕ್ಕೆ ಮುಂದಾಗಿದೆ. ಆಸಕ್ತರಿಗೆ ಅಗತ್ಯ ತರಬೇತಿ ನೀಡಲಿದೆ ಎಂದು ತಿಳಿಸಿದರು.
ಬರಗೂರಿನ ಅಲೈ ತಂಡದವರು ‘ಮೊಹರಂ ಅಲೈ ಕುಣಿತ’ ನಡೆಸಿಕೊಡುವ ಮೂಲಕ ‘ಹಿಂದೂ-ಮುಸ್ಲಿಂ’ ಭಾವೈಕ್ಯತೆಯನ್ನು ಸಾರಿದರು. ಗಾಯಕ ಚಿಂತನ್ ವಿಕಾಸ್, ಕುವೆಂಪು ರಚಿತ ವಿಶ್ವಮಾನವ ಗೀತೆ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಗೀತೆಯನ್ನು ವಿಶಿಷ್ಟ ರಾಗ ಸಂಯೋಜನೆಯಲ್ಲಿ ಹಾಡಿದರು. ವಿವಿಧ ಜಾತಿ, ಧರ್ಮ, ಭಾಷೆ, ಲಿಂಗ, ಪ್ರದೇಶಗಳಿಗೆ ಸೇರಿದ ಸಾಮಾನ್ಯ ಜನರ ಕೂಡಿಬಾಳುವ ಬದುಕಿನ ತತ್ವವನ್ನು ಸಾರಿದರು.
ಗಮನ ಸೆಳೆದ ಜೇನುಕುರುಬರ ಪ್ರದರ್ಶನ: ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ ಸಹಿತ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿರುವ ಕೊಡಗು ಜಿಲ್ಲೆಯ ಕುಗ್ರಾಮದಿಂದ ಬಂದಿದ್ದ ಜೇನು ಕುರುಬರ ಯುಜಜನರ ತಂಡ ನೀಡಿದ ಕಲಾ ಪ್ರದರ್ಶನ ನೆರೆದಿದ್ದವರು ಗಮನ ಸೆಳೆಯಿತು. ಈ ಕಲಾ ತಂಡದ ಪ್ರದರ್ಶನವನ್ನು ಕಂಡು ಮೂಕವಿಸ್ಮಿತರಾದ ಹಂಸಲೇಖ ಅವರು ತಂಡಕ್ಕೆ ಸ್ಥಳಕ್ಕೆ 25 ಸಾವಿರ ರೂ. ಬಹುಮಾನ ಘೋಷಿಸಿದರು.
ಹರಿಯೋದು ಬೇಡ
‘ಮನಸು, ಬಟ್ಟೆ, ಬಂಧಗಳನ್ನು ನೇಯೋಣ ಹರಿಯೋದು ಬೇಡ. ಇಂದು ಜಗತ್ತಿನಾದ್ಯಂತ ಜಾನಪದಕ್ಕೆ ದೊಡ್ಡ ಅನುಕಂಪದ ಅಲೆ ಎದ್ದಿದೆ. ಅವರಿಗೆ ಉತ್ಸಾಹ ಇದೆ. ಕೊಂಚ ಶೃತಿ ಲಯ ಬದ್ಧ, ಶಿಸ್ತಿನಿಂದ ಇದ್ದರೆ ಬೆಂಬಲ ಸಿಗುತ್ತದೆ. ಆ ಶಿಸ್ತನ್ನು ರೂಢಿಸಿಕೊಂಡರೆ ಜಾನಪದಕ್ಕೆ ಉತ್ತಮ ಬೆಂಬಲ ಸಿಗುತ್ತದೆ'
-ಹಂಸಲೇಖ ಸಂಗೀತ ನಿರ್ದೇಶಕ
‘ನಾವೆಲ್ಲ ಯುವಕರು, ನಾವು ನಮ್ಮ ಬದುಕನ್ನು ಯಾವ ದಿಟ್ಟಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಬೇಕು. ನಾನು ಪ್ರಗತಿಪರಳಾಗಬೇಕು ಎಂದು ಯೋಚಿಸುತ್ತೇನೆ. ಅದರಂತೆ ನಡೆಯುತ್ತಿದ್ದೇನೆ. ಸಮಾಜದಲ್ಲಿರುವ ಅಸಮಾನತೆ ತೊಲಗಬೇಕು ಎಂದರೆ ವಿದ್ಯಾಭ್ಯಾಸ ಮುಖ್ಯ. ಸಮಾನತೆಯನ್ನು ಸಮಾಜದಲ್ಲಿ ತರುವತ್ತ ನಾವೆಲ್ಲರೂ ಹೆಜ್ಜೆ ಹಾಕಬೇಕು'
-ಎಂ.ಡಿ.ಪಲ್ಲವಿ ಗಾಯಕಿ
‘ನಾವು ನಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳೂ ಒಂದು ಕ್ರಮ. ಇಂದು ಮಾತನಾಡಿದರೇ ದೇಶದ್ರೋಹ ಎನ್ನುತ್ತಾರೆ. ನಾವು ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇನ್ನೊಂದು ದಾರಿ ಹುಡುಕುತ್ತಿದ್ದೇವೆ. ಇದು ಪ್ರತಿರೋಧದ ಧ್ವನಿ. ಇದು ಬೇರೆ ನೆಲೆಯಲ್ಲಿ ಮುಂದು ಹೋಗಲಿ'
-ವಿಜಯಮ್ಮ ಹಿರಿಯ ಪತ್ರಕರ್ತೆ
‘ಸ್ವಾತಂತ್ರ್ಯ ಬಂದು 75 ವರ್ಷಗಳ ಕಳೆದರೂ ಜಾತಿ, ಧರ್ಮವನ್ನು ಮುಂದುವರೆಸುತ್ತಿರುವುದು ದುರಂತ. ಇದರಿಂದ ಹೊರಗಡೆ ಬರಬೇಕಾಗಿದೆ. ಸಾಮೂಹಿಕವಾಗಿ ಆಗದಿದ್ದರೂ ಒಬ್ಬೊಬ್ಬರಾದರೂ ಹೊರಗಡೆ ಬರಬೇಕು. ಹನಿ ಹನಿಗೂಡಿದರೆ ಹಳ್ಳವಾಗುತ್ತದೆ. ಅದೇ ಹಾದಿಯಲ್ಲಿ ವಿಶ್ವ ಮಾನವ ಸಂದೇಶ ಸಾರುವತ್ತ ಹೆಜ್ಜೆ ಹಾಕಬೇಕು'
-ಮಂಸೋರೆ ಚಿತ್ರ ನಿರ್ದೇಶಕ







.jpeg)
.jpeg)
.jpeg)

