ಕಯ್ಯಾರ ಕಿಞ್ಞಣ್ಣ ರೈ, ಜಯದೇವಿ ತಾಯಿ ಲಿಗಾಡೆ ಸ್ಮಾರಕ ಪ್ರಶಸ್ತಿ ಪ್ರಕಟ
ಮಂಗಳೂರು, ಡಿ.29: ಹಿರಿಯ ಸ್ವಾತಂತ್ರ ಹೋರಾಟಗಾರ, ಕವಿ ಕಯ್ಯಾರ ಕಿಂಞಣ್ಣ ರೈ ಮತ್ತು ಕನ್ನಡಪರ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ ಸ್ಮಾರಕ ಗಡಿನಾಡ ಪ್ರಶಸ್ತಿಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಿಸಿದೆ.
ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಪ್ರಶಸ್ತಿಯನ್ನು ಕಾಸರಗೋಡಿನ ಬಿ.ಪುರುಷೋತ್ತಮ ಮಾಸ್ಟರ್ ಮತ್ತು ಜಯದೇವಿ ತಾಯಿ ಲಿಗಾಡೆ ಸ್ಮಾರಕ ಪ್ರಶಸ್ತಿಯು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನೀಡಲಾಗುತ್ತದೆ. ಪ್ರಶಸ್ತಿಯು ತಲಾ ರೂ 1 ಲಕ್ಷ ರೂ.ವನ್ನು ಒಳಗೊಂಡಿರುತ್ತದೆ.
83ರ ಹರೆಯದ ಕಾಸರಗೋಡಿನ ಬಿ. ಪುರುಷೋತ್ತಮ ಮಾಸ್ಟರ್ ಕಣ್ಣೂರು ವಿಶ್ವವಿದ್ಯಾನಿಲಯದ ಸಂದರ್ಶಕ ಉಪನ್ಯಾಕರಾಗಿ ದಶಕಗಳ ಸೇವೆ ಸಲ್ಲಿಸಿದವರು. ಕಾಸರಗೋಡಿನ ಕನ್ನಡ ಸಂತ, ಗಡಿನಾಡ ಕಣ್ವ ಎಂದು ಅಭಿಮಾನಿಗಳಿಗಳಿಂದ ಗುರುತಿಸಿ ಕೊಂಡವರು. ಕಾಸರಗೋಡಿನ ಕನ್ನಡ ಹೊರಾಟಗಾರರಾದ ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ ಕುಣಿಕುಳ್ಳಾಯ ಹಾಗೂ ಕಯ್ಯಾರ ಕಿಂಞಣ್ಣ ರೈಯವರ ಜತೆ ನಿಕಟ ಒಡನಾಟ ಹೊಂದಿದ್ದರು. ಕಾಸರಗೋಡಿನಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗ ಪ್ರಾರಂಭವಾಗಲು ಪ್ರಧಾನ ಕಾರಣಕರ್ತರು.
1890 ಜುಲೈ, 20ರಂದು ಸ್ಥಾಪನೆಯಾದ ಧಾರವಾಢದ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಲ್ಲೊಂದಾಗಿದೆ. 132ರ ಸಂಭ್ರಮಾಚರಣೆಯಲ್ಲಿರುವ ಸಂಘವು ದೇಶದ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಚಳುವಳಿಯಿಂದ ಹಿಡಿದು ಗೋಕಾಕ ಚಳುವಳಿ, ಮಹಿಷಿ ಮತ್ತು ನಂಜುಂಡಪ್ಪವರದಿ ಜಾರಿ ಸೇರಿದಂತೆ ಹಲವು ಹೋರಾಟಗಳನ್ನು ಹುಟ್ಟುಹಾಕಿ ಮುನ್ನಡೆಸಿ ಯಶಸ್ವಿ ಕಂಡಿತ್ತು. ಕನ್ನಡ ನೆಲ-ಜಲ-ಭಾಷೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಈ ಸಂಘವು ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ 8 ಅಖಿಲ ಭಾರತ ಹೊರನಾಡು ಕನ್ನಡ ಸಂಘಗಳ ಮಹಾಮೇಳಗಳನ್ನು ಯಶಸ್ವಿಯಾಗಿ ಏರ್ಪಡಿಸಿದೆ.







