ಕೋರ್ಟ್ ಆದೇಶದಂತೆ ಕೂಡಲಸಂಗಮ ಅಂಕಿತವನ್ನೇ ಬಳಸುತ್ತೇವೆ: ಮಾತೆ ಗಂಗಾದೇವಿ

photo- twitter (ಮಾತೆ ಗಂಗಾದೇವಿ)
ಬಾಗಲಕೋಟೆ, ಡಿ.29: ಕೋರ್ಟ್ ಆದೇಶದಂತೆ ಜಗಜ್ಯೋತಿ ಬಸವಣ್ಣನ ವಚನಗಳಲ್ಲಿ ಲಿಂಗದೇವ ಬದಲಿಗೆ ಕೂಡಲಸಂಗಮದೇವ ಅಂಕಿತವನ್ನೇ ನಾವು ಬಳಸಲಿದ್ದೇವೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಹೇಳಿದ್ದಾರೆ.
ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವರು ಇನ್ನೂ ಲಿಂಗದೇವ ಬಳಕೆ ಮಾಡುತ್ತಿದ್ದು, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದರು.
ಬಸವಧರ್ಮ ಪೀಠದಿಂದ ಹಿಂದಿನ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಪ್ರಕಟಿಸಿದ್ದ ವಚನದೀಪ್ತಿ ಪುಸ್ತಕದಲ್ಲಿ ಲಿಂಗದೇವ ಅಂಕಿತ ಬಳಸಲಾಗಿತ್ತು. ರಾಜ್ಯ ಸರಕಾರ ಅದನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಆ ಕ್ರಮವನ್ನು ನಂತರ ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದೆ.
ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸಲು ವಚನದೀಪ್ತಿ ಪುಸ್ತಕದ ಮರು ಮುದ್ರಣ ನಿಲ್ಲಿಸಿದ್ದ ಮಾತೆ ಮಹಾದೇವಿ, ಲಿಂಗದೇವ ಅಂಕಿತ ಬಳಸುವುದಿಲ್ಲ ಎಂದು 2017ರ ಸೆ.21ರಂದು ಸ್ಪಷ್ಟನೆ ನೀಡಿದ್ದರು. ಅದನ್ನೇ ನಾವೂ ಮುಂದುವರೆಸಿಕೊಂಡು ಬಂದಿದ್ದೇವೆ ಎಂದರು.
ಲಿಂಗದೇವ ಬಳಕೆಯಿಂದ ಲಿಂಗಾಯತ ಧರ್ಮ ಸ್ವತಂತ್ರ ಹೋರಾಟಕ್ಕೂ ಹಿನ್ನಡೆ ಆಗಿದೆ. ಅದನ್ನು ತಪ್ಪಿಸಲು ಹಾಗೂ ನ್ಯಾಯಾಲಯದ ತೀರ್ಪು ಗೌರವಿಸಲು ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಹೇಳಿದರು. ಅಲ್ಲದೆ, ಕೂಡಲಸಂಗಮ ದೇವ ಅಂಕಿತವನ್ನೇ ಬಳಸಲು ಸುತ್ತೋಲೆ ಹೊರಡಿಸಲಾಗುವುದು ಎಂದರು. ಬಸವಧರ್ಮ ಪೀಠದ ಉಪಾಧ್ಯಕ್ಷರಾದ ಮಹಾದೇಶ್ವರ ಸ್ವಾಮೀಜಿ, ಕೂಡಲಸಂಗಮದ ಹಿರಿಯರಾದ ಜಿ.ಜಿ.ಪಾಟೀಲ ಉಪಸ್ಥಿತರಿದ್ದರು.







