ಡಿ.31ರಂದು ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ

file photo- ಎಡಿಜಿಪಿ ಭಾಸ್ಕರ್ ರಾವ್
ಬೆಂಗಳೂರು, ಡಿ.29: ನಗರದ ಮಾಜಿ ಪೊಲೀಸ್ ಆಯುಕ್ತ ಹಾಗೂ ರೈಲ್ವೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಭಾಸ್ಕರ್ ರಾವ್ ಅವರು ಸಲ್ಲಿಸಿದ್ದ ಸ್ವಯಂನಿವೃತ್ತಿ ಅರ್ಜಿಯನ್ನು ರಾಜ್ಯ ಸರಕಾರ ಅನುಮೋದಿಸಿರುವ ಅಧಿಕೃತ ಆದೇಶ ಹೊರಬಿದ್ದಿದೆ.
ಸ್ವಯಂನಿವೃತ್ತಿ ಅರ್ಜಿಯನ್ನು ರಾಜ್ಯ ಸರಕಾರ ಅನುಮೋದಿಸಿರುವುದರಿಂದ ಇನ್ನೆರಡು ದಿನಗಳಲ್ಲಿ ಡಿ.31 ಭಾಸ್ಕರ್ ರಾವ್ ನಿವೃತ್ತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
1990ರ ಬ್ಯಾಚ್ ಐಪಿಎಸ್ ಅಧಿಕಾರಿಯಾದ ಭಾಸ್ಕರ್ ರಾವ್ ಅವರು ಕಳೆದ ಸೆಪ್ಟಂಬರ್ನಲ್ಲಿ ಸ್ವಯಂನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಕೂಡಲೇ ಕಡತವನ್ನು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಆದರೆ ಹಲವು ದಿನಗಳ ಕಾಲ ಅರ್ಜಿಯ ಕಡತ ಬಾಕಿ ಉಳಿದಿತ್ತು. ಇದೀಗ ಸರಕಾರ ಅವರ ಸ್ವಯಂನಿವೃತ್ತಿ ಅರ್ಜಿಯನ್ನು ಪರಿಗಣಿಸಿ ಇತ್ತೀಚೆಗೆ ಮುಖ್ಯಮಂತ್ರಿಗಳು ಸಹಿ ಮಾಡಿದ್ದರು.
ಈ ಮೂಲಕ ಇದೇ ಡಿಸೆಂಬರ್ 31ರಂದು ಭಾಸ್ಕರ್ ರಾವ್ ಅಧಿಕಾರದಿಂದ ಹೊರಬರಲಿದ್ದಾರೆ. 1954ರಂದು ಜನಿಸಿದ ಭಾಸ್ಕರ್ ರಾವ್ ಅವರು 2019-20ರ ಅವಧಿಯಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗದಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ರೈಲ್ವೆ ಪೊಲೀಸ್ ವಿಭಾಗದ ಎಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಭಾಸ್ಕರ್ ರಾವ್ ಅವರ ನಿವೃತ್ತಿಯ ಬಳಿಕ ರಾಜ್ಯದಲ್ಲಿ ಎಡಿಜಿಪಿಯ ಎರಡನೇ ಶ್ರೇಣಿಯ ಹುದ್ದೆ ಖಾಲಿ ಬೀಳಲಿದ್ದು ಡಿ.31ರಂದು ಐಜಿಪಿಗಳಾದ ಮುರುಗನ್, ಶರಶ್ಚಂದ್ರ ಹಾಗೂ ನಂಜುಂಡಸ್ವಾಮಿ ಅವರು ಎಡಿಜಿಪಿ ಹುದ್ದೆಗೆ ಭಡ್ತಿ ಹೊಂದಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, ರಾಜಕೀಯ ಸೇರುವ ಬಗ್ಗೆ ಯಾವುದೇ ರೀತಿಯ ನಿರ್ಧಾರ ಕೈಗೊಂಡಿಲ್ಲ. ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.







