ಪೆಲೆಸ್ತೀನ್ ಜತೆಗಿನ ಸಂಬಂಧ ಸುಧಾರಣೆ ಕ್ರಮಕ್ಕೆ ಇಸ್ರೇಲ್ ಅನುಮೋದನೆ

ಪೆಲೆಸ್ತೀನ್ ಅಧ್ಯಕ್ಷ ಮಮೂದ್ ಅಬ್ಬಾಸ್(photo:PTI)
ಜೆರುಸಲೇಂ, ಡಿ.29: ಬುಧವಾರ ಪೆಲೆಸ್ತೀನ್ ಅಧ್ಯಕ್ಷ ಮಮೂದ್ ಅಬ್ಬಾಸ್ ರನ್ನು ಇಸ್ರೇಲ್ ನಲ್ಲಿ ಭೇಟಿಯಾದ ಬಳಿಕ ಇಸ್ರೇಲ್ ನ ರಕ್ಷಣಾ ಸಚಿವರು ಪೆಲೆಸ್ತೀನ್ ಜತೆಗಿನ ಸಂಬಂಧ ಸುಧಾರಣೆಯ ಹಲವು ಕ್ರಮಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ ಟೆಲ್ಅವೀನ್ನಲ್ಲಿ ಇಸ್ರೇಲ್ ರಕ್ಷಣಾ ಸಚಿವ ಬೆನ್ನೀ ಗಾಂಟ್ಸ್ ಅವರ ನಿವಾಸಕ್ಕೆ ಅಬ್ಬಾಸ್ ಭೇಟಿ ನೀಡಿದರು. 2010ರ ನಂತರ ಅಬ್ಬಾಸ್ ಇಸ್ರೇಲ್ ನೊಳಗೆ ಇಸ್ರೇಲ್ ಅಧ್ಯಕ್ಷರನ್ನು ಪ್ರಥಮ ಬಾರಿಗೆ ಭೇಟಿಯಾದರು. ಇಸ್ರೇಲ್ ಮತ್ತು ಅಬ್ಬಾಸ್ ಅವರ ಪೆಲೆಸ್ತೀನಿಯನ್ ಪ್ರಾಧಿಕಾರದ (ಇದು ಆಕ್ರಮಿತ ಪಶ್ಚಿಮ ದಂಡೆಯ ಸುತ್ತಮುತ್ತಲಿನ ಪ್ರದೇಶದ ಆಡಳಿತ ನಿರ್ವಹಿಸುತ್ತದೆ) ನಡುವೆ ಭದ್ರತಾ ಸಮನ್ವಯ ಸಾಧಿಸುವ ಕ್ರಮಗಳ ಬಗ್ಗೆ ಉಭಯ ಮುಖಂಡರು ಚರ್ಚಿಸಿದರು.
ತೆರಿಗೆ ಪಾವತಿಯನ್ನು ಪೆಲೆಸ್ತೀನಿಯನ್ ಅಥಾರಿಟಿಗೆ ವರ್ಗಾಯಿಸುವುದು, ಪೆಲೆಸ್ತೀನಿ ವ್ಯಾಪಾರಿಗಳು ಹಾಗೂ ಪ್ರಮುಖ ವ್ಯಕ್ತಿಗಳಿಗೆ ಪರ್ಮಿಟ್ ದೃಢೀಕರಣ, ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿ ಸಾವಿರಾರು ಪೆಲೆಸ್ತೀನಿಯರಿಗೆ ನಿವಾಸ ಸ್ಥಾನಮಾನ ಸಹಿತ ವಿಶ್ವಾಸ ವೃದ್ಧಿಸುವ ಕ್ರಮಗಳನ್ನು ಅನುಮೋದಿಸಲಾಗಿದೆ ಎಂದು ಗಾಂಟ್ಸ್ ಅವರ ಕಚೇರಿ ಹೇಳಿದೆ. 1990ರ ದಶಕದಲ್ಲಿ ಸಹಿಹಾಕಲಾದ ಮಧ್ಯಂತರ ಒಪ್ಪಂದದ ಪ್ರಕಾರ, ಪೆಲೆಸ್ತೀನ್ ಪ್ರಾಧಿಕಾರದ ಪರವಾಗಿ ಇಸ್ರೇಲ್ ನೂರಾರು ಮಿಲಿಯನ್ ಡಾಲರ್ ಮೌಲ್ಯದ ತೆರಿಗೆ ಸಂಗ್ರಹಿಸುತ್ತದೆ. ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವ ಪೆಲೆಸ್ತೀನ್ ಗೆ ತೆರಿಗೆ ವರ್ಗಾವಣೆ ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಸಂಘರ್ಷದಲ್ಲಿ ಮೃತರಾದವರ, ಗಾಯಗೊಂಡವರ ಸಂಬಂಧಿಕರಿಗೆ ನೀಡುವ ಸ್ಟೈಪೆಂಡ್ ಅನ್ನು ಇಸ್ರೇಲ್ ತಡೆಹಿಡಿದಿದೆ. ಈ ಹಣ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಲು ಬಳಕೆಯಾಗುತ್ತಿದೆ ಎಂದು ಇಸ್ರೇಲ್ ಹೇಳುತ್ತಿದೆ.
ಇಸ್ರೇಲ್ ಸುಮಾರು 9,500 ಪೆಲೆಸ್ತೀನಿಯರಿಗೆ ನಿವಾಸ ಪರ್ಮಿಟ್ ಅನುಮೋದಿಸಿದೆ. ಪೆಲೆಸ್ತೀನಿಯನ್ ಜನಸಂಖ್ಯೆ ನೋಂದಣಿಯನ್ನು ಇಸ್ರೇಲ್ ನಿಯಂತ್ರಿಸುತ್ತಿದ್ದು ಕಳೆದ ಕೆಲ ವರ್ಷಗಳಿಂದ ಇಸ್ರೇಲ್ನ ಕಾರ್ಯನೀತಿಯಿಂದಾಗಿ ಸುಮಾರು 10000 ಪೆಲೆಸ್ತೀನಿಯರು ಕಾನೂನುಬದ್ಧ ಸ್ಥಾನಮಾನದಿಂದ ವಂಚಿತರಾಗಿದ್ದಾರೆ ಆಕ್ರಮಿತ ಪ್ರದೇಶದಲ್ಲೂ ಇವರ ಚಲನವಲನದ ಮೇಲೆ ನಿರ್ಬಂಧವಿದೆ. ಅಕ್ಟೋಬರ್ನಲ್ಲಿ ಸುಮಾರು 4000 ಪೆಲೆಸ್ತೀನಿಯರಿಗೆ ಇಸ್ರೇಲ್ ಕಾನೂನುಬದ್ಧ ಸ್ಥಾನಮಾನ ನೀಡಿದೆ. ಪೆಲೆಸ್ತೀನ್ ಜತೆಗಿನ ಶಾಂತಿ ಮಾತುಕತೆ ಮುಂದುವರಿಸಲು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಆಸಕ್ತರಾಗಿಲ್ಲ.
ಈ ಮಧ್ಯೆ, ಗಾಂಟ್ಸ್ ಮತ್ತು ಅಬ್ಬಾಸ್ ಮಾತುಕತೆಗೆ(ಬೆನೆಟ್ ಸರಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ 2ನೇ ಬಾರಿಗೆ) ಇಸ್ರೇಲ್ ನ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.







