ಕುವೆಂಪು ಶ್ರೀರಾಮಾಯಣ ದರ್ಶನಂ`ವಚನ ದೀಪಿಕೆ’ ಲೋಕಾರ್ಪಣೆ
ಕಾವ್ಯ ಸಹೃದಯರಿಗೆ ಆಪ್ತವಾಗುವ ಈ ಕೃತಿ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ: ಮಲ್ಲೇಪುರಂ ವೆಂಕಟೇಶ್

ಬೆಂಗಳೂರು, ಡಿ.29: ಜಿ. ಕೃಷ್ಣಪ್ಪನವರು ರಚಿಸಿರುವ ‘ವಚನ ದೀಪಿಕೆ’ ಕುವೆಂಪು ಕಾವ್ಯ ಸಹೃದಯರಿಗೆ ಆಪ್ತವಾಗುವ ಸರಳ, ಸುಂದರ ಶೈಲಿಯಲ್ಲಿದೆ. ಮೂಲಕಾವ್ಯವನ್ನು ಅಭ್ಯಾಸ ಮಾಡುವ ಆಸಕ್ತರಿಗೆ ಉಪಯುಕ್ತವಾಗಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದ್ದಾರೆ.
ಗಾಂಧಿಭವನದಲ್ಲಿ ಇಂದು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ವಚನ ದೀಪಿಕೆ’ ಕುವೆಂಪು ಕಾವ್ಯ ಸಹೃದಯರಿಗೆ ಆಪ್ತವಾಗುವ ಸರಳ ಶೈಲಿಯಲ್ಲಿದೆ. ಮೂಲಕಾವ್ಯವನ್ನು ಅಭ್ಯಾಸ ಮಾಡುವ ಆಸಕ್ತರಿಗೆ ಉಪಯುಕ್ತವಾಗಿದೆ. `ಶ್ರೀ ರಾಮಾಯಣದರ್ಶನಂ ನಿಘಂಟು’ ಇದರ ಜೊತೆಯಲ್ಲಿರುವುದು ಇನ್ನೊಂದು ವಿಶೇಷ. ಈ ಕೃತಿ ಕನ್ನಡ ಸಾಹಿತ್ಯಕ್ಕೆ ನೀಡಿದ ಉತ್ತಮ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕುವೆಂಪು ಅವರು 1949ರಲ್ಲಿ ರಚಿಸಿದ ಮಹಾಕಾವ್ಯ ಶ್ರೀರಾಮಾಯಣದರ್ಶನಂ ಆಧುನಿಕ ಕನ್ನಡ ಸಾಹಿತ್ಯದ ಮೇರುಕೃತಿ. ಕುವೆಂಪು ಅವರು ರಾಮಾಯಣದ ದುಷ್ಟ ಪಾತ್ರಗಳು ಪಶ್ಚಾತ್ತಾಪಗೊಂಡು ಆತ್ಮ ಶೋಧಕ್ಕೆ ಒಳಗಾಗುವಂತೆ ಮರುಸೃಷ್ಟಿಸಿದ್ದಾರೆ. ಆ ಮಹಾಕಾವ್ಯ ಪ್ರವೇಶಕ್ಕೆ ಹಲವು ಗದ್ಯ ರೂಪಿ ಕೃತಿಗಳು ಈಗಾಗಲೇ ಹೊರಬಂದಿವೆ. ಜಿ. ಕೃಷ್ಣಪ್ಪನವರು ಆ ಮಹಾಕಾವ್ಯದ ದರ್ಶನ ದೀಪ್ತಿಗೆ ಒಳಗಾಗಿ ಅದನ್ನು ‘ವಚನ ದೀಪಿಕೆ’ಯಾಗಿ ಇಲ್ಲಿ ನೀಡಿದ್ದಾರೆ.
ನಾಡೋಜ ಡಾ. ವೂಡೇ.ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಗ್ರಂಥದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಭಾಗವಹಿಸಿದ್ದರು. ಶ್ರೀರಾಮಾಯಣ ದರ್ಶನಂ ಕಾವ್ಯ ವಾಚನವನ್ನು ವಿದ್ವಾನ್ ಖಾಸಿಂ ಮಲ್ಲಿಗೆ ಮಡುವು ನಡೆಸಿಕೊಟ್ಟರು.







