ಜೀವನ ಪರ್ಯಂತ ಸಜೆ ವಿಧಿಸಿದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ

ಜೀವನಪರ್ಯಂತ ಸಜೆ ವಿಧಿಸಿದ ತೀರ್ಪು ಕೇಳಿ ಕೋಪೋದ್ರಿಕ್ತನಾದ ಆರೋಪಿ ತೀರ್ಪು ಘೋಷಿಸಿದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ಗುಜರಾತಿನಲ್ಲಿ ವರದಿಯಾಗಿದೆ.
ಮಧ್ಯಪ್ರದೇಶ ಮೂಲದ ಆರೋಪಿ ಎಪ್ರಿಲ್ 20 ರಂದು ಐದು ವರ್ಷದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದಾಗಿ ಪ್ರಾಸಿಕ್ಯೂಷನ್ ಹೇಳಿದೆ.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಪೋಕ್ಸೋ ನ್ಯಾಯಾಧೀಶೆ ಪಿ.ಎಸ್ ಕಲಾ ಆರೋಪಿಗೆ ಜೀವನ ಪರ್ಯಂತ ಸಜೆ ವಿಧಿಸಿ ತೀರ್ಪು ಘೋಷಿಸಿದ್ದರು. ತೀರ್ಪು ಕೇಳಿ ಕೋಪಗೊಂಡ ಆರೋಪಿ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ. ಅದಾಗ್ಯೂ, ಚಪ್ಪಲಿ ನ್ಯಾಯಾಧೀಶರ ಮೇಲೆ ಬೀಳದೆ, ಕೆಲವೇ ಅಂತರದಲ್ಲಿ ನ್ಯಾಯಾಧೀಶರು ತಪ್ಪಿಸಿಕೊಂಡರು ಎಂದು ಪಿಟಿಐ ವರದಿ ಮಾಡಿದೆ.
ಮೃತ ಬಾಲಕಿ ವಲಸೆ ಕಾರ್ಮಿಕರೊಬ್ಬರ ಮಗಳಾಗಿದ್ದು, ಆಟವಾಡುತ್ತಿದ್ದ ಬಾಲಕಿಯನ್ನು ಚಾಕಲೇಟ್ ಆಮಿಷ ತೋರಿಸಿ ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಎಂದು ಪ್ರಾಸಿಕ್ಯೂಶನ್ ನ್ಯಾಯಾಲಯಕ್ಕೆ ತಿಳಿಸಿದೆ.
ಘಟನೆ ಸಂಬಂಧಿಸಿ ಹಝೀರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 26 ಸಾಕ್ಷಿಗಳನ್ನೂ, 53 ವಿವಿಧ ದಾಖಲೆಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.





