ಒಮೈಕ್ರಾನ್ ಅಪಾಯ ಈಗಲೂ ಅತ್ಯಧಿಕ ಪ್ರಮಾಣದಲ್ಲಿದೆ ವಿಶ್ವ ಆರೋಗ್ಯ ಸಂಸ್ಥೆ: ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಜಿನೆವಾ, ಡಿ.29: ಕಳೆದ ವಾರ ವಿಶ್ವದಾದ್ಯಂತ ಕೊರೋನ ಸೋಂಕು ಪ್ರಕರಣದಲ್ಲಿ 11% ಏರಿಕೆಯಾಗಿದ್ದು ಒಮೈಕ್ರಾನ್ ಸೋಂಕಿನಿಂದ ಎದುರಾಗಿರುವ ಅಪಾಯ ಇನ್ನೂ ಅತೀ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ.
ಹಲವು ದೇಶಗಳಲ್ಲಿ ಕೊರೋನ ಸೋಂಕು ಉಲ್ಬಣಿಸಿರುವುದರ ಹಿಂದೆ ಒಮೈಕ್ರಾನ್ ಸೋಂಕಿನ ಪಾತ್ರವಿದೆ. ಬಹುತೇಕ ದೇಶಗಳಲ್ಲಿ ಡೆಲ್ಟಾ ರೂಪಾಂತರಿತ ಸೋಂಕಿನ ಪ್ರಮಾಣವನ್ನೂ ಮೀರಿಸಿ ಒಮೈಕ್ರಾನ್ ಸೋಂಕು ಮುಂದುವರಿದಿದೆ . ಒಮೈಕ್ರಾನ್ನ ಹೊಸ ರೂಪಾಂತರಕ್ಕೆ ಸಂಬಂಧಿಸಿದ ಒಟ್ಟಾರೆ ಅಪಾಯ ಅತ್ಯಧಿಕವಾಗಿದೆ ಎಂದು ಕೊರೋನ ಸೋಂಕಿನ ಸಾಪ್ತಾಹಿಕ ಅಂಕಿಅಂಶ ಪರಿಷ್ಕರಣೆಯ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ.
2ರಿಂದ 3 ದಿನದಲ್ಲಿ ದ್ವಿಗುಣಗೊಳ್ಳುವ ಸಾಮರ್ಥ್ಯವುಳ್ಳ ಒಮೈಕ್ರಾನ್ ರೂಪಾಂತರಿ ಡೆಲ್ಟಾಗಿಂತ ವೇಗವಾಗಿ ಬೆಳವಣಿಗೆ ಹೊಂದುತ್ತದೆ ಮತ್ತು ಕ್ಷಿಪ್ರವಾಗಿ ಹರಡುತ್ತಿರುವುದಕ್ಕೆ ಅಮೆರಿಕ, ಬ್ರಿಟನ್ ಸಹಿತ ಹಲವಾರು ದೇಶಗಳ ಉದಾಹರಣೆ ನಮ್ಮ ಮುಂದಿದೆ. ಅಮೆರಿಕ ಮತ್ತು ಬ್ರಿಟನ್ನಲ್ಲಿ ಒಮೈಕ್ರಾನ್ ಪ್ರಬಲವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಪ್ರತಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಮತ್ತು ಆಂತರಿಕ ಪ್ರಸರಣ ಸಾಮರ್ಥ್ಯ ಹೆಚ್ಚಿರುವುದರಿಂದ ಒಮೈಕ್ರಾನ್ ಕ್ಷಿಪ್ರವಾಗಿ ಪ್ರಸಾರವಾಗುತ್ತಿದೆ. ಆದರೂ, ಒಮೈಕ್ರಾನ್ ಪ್ರಥಮ ಬಾರಿಗೆ ವರದಿಯಾದ ದಕ್ಷಿಣ ಆಫ್ರಿಕಾದಲ್ಲಿ ಈಗ ಸೋಂಕಿನ ಪ್ರಮಾಣ 29% ಕಡಿಮೆಯಾಗಿದೆ ಎಂದು ವರದಿ ಹೇಳಿದೆ.







