ಗೂಗಲ್ ವಿರುದ್ಧ ಜ.5ರವರೆಗೆ ಬಲವಂತದ ಕ್ರಮವಿಲ್ಲ: ಹೈಕೋರ್ಟ್ ಗೆ ಸಿಸಿಐ ಹೇಳಿಕೆ

ಬೆಂಗಳೂರು, ಡಿ.29: ಪ್ಲೇ ಸ್ಟೋರ್ ನಿಯಮಗಳ ಕುರಿತು ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಗೂಗಲ್ ಸಂಸ್ಥೆ ವಿರುದ್ಧ ಜ.5ರವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ಭಾರತೀಯ ಸ್ಪರ್ಧಾ ಆಯೋಗ(ಸಿಸಿಐ) ಹೈಕೋರ್ಟ್‍ಗೆ ತಿಳಿಸಿದೆ.
ಸಿಸಿಐ ತನಿಖೆಗೆ ಉತ್ತರಿಸಲು ಹೆಚ್ಚಿನ ಕಾಲಾವಕಾಶ ಕೋರಿ ಗೂಗಲ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಗೂಗಲ್ ಇಂಡಿಯಾ ಪೈ. ಲಿಮಿಟೆಡ್ ಪರ ವಾದಿಸಿದ ವಕೀಲರು, ಸಿಸಿಐ ಹೊರಡಿಸಿರುವ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿದರು. ಸಿಸಿಐ ಪರ ವಾದಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್, ಸಿಸಿಐ ಕ್ರಮವನ್ನು ಸಮರ್ಥಿಸಿದರು. ಅಲ್ಲದೇ, ಮುಂದಿನ ವಿಚಾರಣೆವರೆಗೂ ಗೂಗಲ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ಭರವಸೆ ನೀಡಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ವಿಚಾರಣೆಯನ್ನು ಜ.5ಕ್ಕೆ ಮುಂದೂಡಿತು.
ಪ್ರಕರಣವೇನು: ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಷನ್ ಎಂಬ ನವೋದ್ಯಮ ಸಂಸ್ಥೆ, ನ್ಯೂ ಪ್ಲೇಸ್ಟೋರ್ ನೀತಿಯನ್ನು ಪ್ರಶ್ನಿಸಿ ಸಿಸಿಐಗೆ ದೂರು ನೀಡಿತ್ತು. ದೂರು ಆಲಿಸಿದ ಸಿಸಿಐ, ಗೂಗಲ್ ಪ್ಲೇ ಸ್ಟೋರ್ ನಿಯಮಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು.
ಅಲ್ಲದೆ, ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿದ್ದ ಸಿಸಿಐ ಡಿ.31ರೊಳಗೆ ವಿವರಣೆ ನೀಡುವಂತೆ ಗಡುವು ವಿಧಿಸಿತ್ತು. ಈ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಿರುವ ಗೂಗಲ್ ತನಗೆ ಉತ್ತರಿಸಲು 8 ವಾರ ಕಾಲಾವಕಾಶ ನೀಡಬೇಕೆಂದು ಕೋರಿದೆ. ಅಲ್ಲದೆ, ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಐ ಸಮಿತಿಗೆ ನ್ಯಾಯಿಕ ಸದಸ್ಯರನ್ನು ನೇಮಿಸುವಂತೆ ಗೂಗಲ್ ಮನವಿ ಮಾಡಿದೆ.







