ಭಾರತಕ್ಕೆ ಲೀಸ್ ನೀಡಿದ್ದ ತೈಲ ಸಂಗ್ರಹಾಗಾರ ಮರುಸ್ವಾಧೀನಕ್ಕೆ ಶ್ರೀಲಂಕಾ ನಿರ್ಧಾರ

ಸಾಂದರ್ಭಿಕ ಚಿತ್ರ:PTI
ಕೊಲಂಬೋ, ಡಿ.28: ಶ್ರೀಲಂಕಾದ ಪೂರ್ವ ಕರಾವಳಿಯ ಟ್ರಿಂಕೋಮಲಿ ಜಿಲ್ಲೆಯಲ್ಲಿ ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿರುವ 2ನೇ ವಿಶ್ವಯುದ್ಧದ ಯುಗಕ್ಕೆ ಸಂಬಂಧಿಸಿದ 99 ತೈಲ ಸಂಗ್ರಹಾಗಾರಗಳನ್ನು ಭಾರತಕ್ಕೆ ಲೀಸ್ ನೀಡಲಾಗಿದ್ದು ಇದನ್ನು ಮರುಸ್ವಾಧೀನ ಪಡಿಸಿಕೊಳ್ಳುವ ಕುರಿತ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಶ್ರೀಲಂಕಾದ ಇಂಧನ ಸಚಿವ ಉದಯ ಗಮನ್ಪಿಲ ಬುಧವಾರ ಹೇಳಿದ್ದಾರೆ.
ದ್ವಿತೀಯ ವಿಶ್ವಯುದ್ಧದ ಸಂದರ್ಭ ಟ್ರಿಂಕೋಮಲಿ ಬಂದರನ್ನು ಬ್ರಿಟಿಷರು ಅಭಿವೃದ್ಧಿಪಡಿಸಿದ್ದರು. ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಶನ್(ಐಒಸಿ)ಯ ಶ್ರೀಲಂಕಾ ಸಹಸಂಸ್ಥೆ ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಈ ಬಂದರಿನಲ್ಲಿರುವ 99 ತೈಲ ಸಂಗ್ರಹಾಗಾರಗಳನ್ನು 2003ರಲ್ಲಿ ವಾರ್ಷಿಕ 1 ಲಕ್ಷ ಡಾಲರ್ ಶುಲ್ಕ ಪಾವತಿಸುವ ಕರಾರಿನಡಿ 35 ವರ್ಷದ ಲೀಸ್ ಗೆ ಪಡೆದಿದೆ.
ಇದೀಗ ಇವನ್ನು ಮರುಸ್ವಾಧೀನ ಪಡಿಸಿಕೊಂಡು ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆಯ ಅಂಗಸಂಸ್ಥೆ ಟ್ರಿಂಕೊ ಪೆಟ್ರೋಲಿಯಂ ಟರ್ಮಿನಲ್ ಲಿ.ನ ವಶಕ್ಕೆ ನೀಡುವ ನಿಟ್ಟಿನಲ್ಲಿ ಭಾರತದೊಂದಿಗೆ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಸಚಿವ ಗಮನ್ಪಿಲ ಹೇಳಿದ್ದಾರೆ.





