ರೊಹಿಂಗ್ಯಾ ನಿರಾಶ್ರಿತರಿಗೆ ದೇಶ ಪ್ರವೇಶಿಸಲು ಅವಕಾಶವಿಲ್ಲ: ಇಂಡೊನೇಶ್ಯಾ

ಸಾಂದರ್ಭಿಕ ಚಿತ್ರ:PTI
ಜಕಾರ್ತ, ಡಿ.28: ಇಂಡೋನೇಶ್ಯಾದ ಕಡಲ ತೀರದ ಬಳಿ ಕೆಟ್ಟುನಿಂತಿರುವ, 100ಕ್ಕೂ ಹೆಚ್ಚು ರೊಹಿಂಗ್ಯಾ ನಿರಾಶ್ರಿತರು ಇರುವ ದೋಣಿಯನ್ನು ದುರಸ್ತಿಗೊಳಿಸಲು ನೆರವಾಗುತ್ತೇವೆ. ಆದರೆ ರೊಹಿಂಗ್ಯಾಗಳು ದೇಶದೊಳಗೆ ಪ್ರವೇಶಿಸಲು ಅವಕಾಶವಿಲ್ಲ. ಅವರನ್ನು ದೋಣಿಯಲ್ಲೇ ವಾಪಾಸು ಕಳುಹಿಸುತ್ತೇವೆ ಎಂದು ಇಂಡೋನೇಶ್ಯಾದ ಅಧಿಕಾರಿಗಳು ಹೇಳಿದ್ದಾರೆ.
ಇಂಡೋನೇಶ್ಯಾದ ಪಶ್ಚಿಮದಲ್ಲಿರುವ ಸುಮಾತ್ರಾ ದ್ವೀಪದ ಬಿರೂವೆನ್ ತೀರದ ಬಳಿ ಕೆಟ್ಟುನಿಂತಿದ್ದ ದೋಣಿಯನ್ನು ಮೀನುಗಾರರು ಗುರುತಿಸಿದ್ದರು. ದೋಣಿಯಲ್ಲಿ ಮಹಿಳೆಯರು, ಮಕ್ಕಳ ಸಹಿತ ಸುಮಾರು 120 ರೊಹಿಂಗ್ಯಾ ನಿರಾಶ್ರಿತರಿದ್ದರು.
ರೊಹಿಂಗ್ಯಾಗಳು ಇಂಡೋನೇಶ್ಯಾದ ಪ್ರಜೆಗಳಲ್ಲ. ನಿರಾಶ್ರಿತರು ಎಂಬ ಕಾರಣಕ್ಕೂ ಅವರನ್ನು ದೇಶದೊಳಗೆ ಪ್ರವೇಶಿಸಲು ಅವಕಾಶ ನೀಡುವಂತಿಲ್ಲ. ಇದು ನಮ್ಮ ಸರಕಾರದ ಕಾರ್ಯನೀತಿಯಾಗಿದೆ ಎಂದು ಸ್ಥಳೀಯ ನೌಕಾ ಅಧಿಕಾರಿ ಡಿಯಾನ್ ಸುರಿಯಂಸ್ಯ . ಅವರಿಗೆ ಮಾನವೀಯ ನೆಲೆಯಲ್ಲಿ ಆಹಾರ, ನೀರು, ವೈದ್ಯಕೀಯ ನೆರವು ಒದಗಿಸಲಾಗುವುದು. ಅಲ್ಲದೆ ದೋಣಿಯನ್ನು ದುರಸ್ತಿಗೊಳಿಸಿ ವಾಪಾಸು ಕಳುಹಿಸಲಾಗುವುದು ಎಂದವರು ಹೇಳಿದ್ದಾರೆ.





