ಸೌದಿ ಅರೆಬಿಯಾದ ಮೇಲೆ ಹೌದಿಗಳ ನಿರಂತರ ದಾಳಿ: ಅಮೆರಿಕ ಖಂಡನೆ

ಅಮೆರಿಕ ಅಧ್ಯಕ್ಷ ಜೋ ಬೈಡನ್
ವಾಷಿಂಗ್ಟನ್, ಡಿ.29: ಸೌದಿ ಅರೆಬಿಯಾದ ಮೇಲೆ ಹೌದಿ ಬಂಡುಗೋರರು ನಡೆಸುತ್ತಿರುವ ನಿರಂತರ ದಾಳಿಯನ್ನು ಖಂಡಿಸಿರುವ ಅಮೆರಿಕ, ಈ ಸಂಘಟನೆ ತನ್ನ ಮಿತ್ರರಾಷ್ಟ್ರಗಳಿಗೆ ಬೆದರಿಕೆಯಾಗಿದೆ ಎಂದಿದೆ.
ಹೌದಿಗಳು ನಡೆಸಿದ ದಾಳಿಯಲ್ಲಿ ಸುಮಾರು 90%ದಷ್ಟನ್ನು ಹಿಮ್ಮೆಟ್ಟಿಸಲಾಗಿದೆ. ಇದನ್ನು 100%ಕ್ಕೆ ಏರಿಸುವುದು ನಮ್ಮ ಉದ್ದೇಶವಾಗಿದೆ ಎಂದು ವರ್ಚುವಲ್ ವೇದಿಕೆಯ ಮೂಲಕ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ. ಈ ಮೂಲಕ ಹೌದಿ ಸಂಘಟನೆಯ ಪ್ರಮುಖ ಮುಖಂಡರಿಗೆ ದಂಡ ವಿಧಿಸುವ ಅಥವಾ ಅವರನ್ನು ಹೊಣೆಗಾರರನ್ನಾಗಿಸುವ ಅಮೆರಿಕದ ಕಾರ್ಯನೀತಿಯ ಮುನ್ಸೂಚನೆ ನೀಡಿದ್ದಾರೆ ಎಂದು ಸೌದಿ ಪ್ರೆಸ್ ಏಜೆನ್ಸಿ(ಎಸ್ಪಿಎ) ವರದಿ ಮಾಡಿದೆ.
ಈ ವರ್ಷದ ಆರಂಭದಿಂದ ಇದುವರೆಗೆ 375ಕ್ಕೂ ಹೆಚ್ಚು ಗಡಿಯಾಚೆಗಿನ ದಾಳಿ ಘಟನೆ ನಡೆದಿದೆ. ಈ ದಾಳಿಗೆ ಹೊಣೆಗಾರರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಜತೆಗೆ, ಸೌದಿ ಅರೆಬಿಯಾದಲ್ಲಿರುವ ತನ್ನ ಮಿತ್ರರು, ಸಹಭಾಗಿಗಳ ಜತೆಗೂಡಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಾಗುವುದು ಎಂದವರು ಹೇಳಿದ್ದಾರೆ.





