ಉತ್ತರಾಖಂಡ: ಧರ್ಮ ಸಂಸದ್ ನಲ್ಲಿ ಪಾಲ್ಗೊಂಡವರಿಗೆ ನೋಟಿಸ್

ಡೆಹ್ರಾಡೂನ್, ಡಿ. 29: ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಒಳಗಾದ ಜಿತೇಂದ್ರ ನಾರಾಯಣ ತ್ಯಾಗಿ ಹಾಗೂ ಸಾಧ್ವಿ ಅನ್ನಪೂರ್ಣ ಅವರಿಗೆ ಹಾಜರಾಗುವಂತೆ ಉತ್ತರಾಖಂಡ ಪೊಲೀಸರು ನೋಟಿಸು ಜಾರಿ ಮಾಡಿದ್ದಾರೆ. ಜಿತೇಂದ್ರ ನಾರಾಯಣ ತ್ಯಾಗಿ ಈ ಹಿಂದೆ ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ನಸೀಮ್ ರಿಝ್ವಿ ಎಂದು ಗುರುತಿಸಿಕೊಂಡಿದ್ದರು. ರಿಝ್ವಿ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಹೆಸರು ಬದಲಾಯಿಸಿಕೊಂಡಿದ್ದರು.
‘‘ಪೊಲೀಸ್ ಠಾಣೆಗೆ ಹಾಜರಾಗುವಂತೆ ಇದುವರೆಗೆ ರಿಝ್ವಿ ಹಾಗೂ ಸಾಧ್ವಿ ಅನ್ನಪೂರ್ಣ ಅವರಿಗೆ ನೋಟಿಸು ರವಾನಿಸಿದ್ದೇವೆ. ದ್ವೇಷ ಭಾಷಣಕ್ಕೆ ಸಂಬಂಧಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿರುವ ಮೂರನೇ ವ್ಯಕ್ತಿಯಾದ ಧರ್ಮದಾಸ್ ಅವರಿಗೆ ಕೂಡ ನೋಟಿಸು ರವಾನಿಸುವ ಸಾಧ್ಯತೆ ಇದೆ’’ ಎಂದು ಹರಿದ್ವಾರ ಕೊಟ್ವಾಲಿ ಪೊಲೀಸ್ ಠಾಣೆಯ ಎಸ್ಎಚ್ಒ ರಾಕೇಂದರ್ ಸಿಂಗ್ ಕಥೈಟ್ ಅವರು ಬುಧವಾರ ಹೇಳಿದ್ದಾರೆ.
ಈ ನಡುವೆ ಧರ್ಮ ಸಂಸದ್ ನ ಆಯೋಜಕರು ರೂಪಿಸಿದ ಮುಖ್ಯ ಸಮಿತಿ, ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅನಾಮಿಕ ಮೌಲಾನಾಗಳ ವಿರುದ್ಧ ಪ್ರತಿ ಎಫ್ಐಆರ್ ದಾಖಲಿಸುವಂತೆ ಕೋರಿ ಮಂಗಳವಾರ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ನ್ಯಾಯಾಲಯದ ಕಾನೂನಿಗೆ ಹೊಣೆಗಾರರಾಗಿರುವುದರಿಂದ ಪೊಲೀಸರು ತನಿಖೆಯನ್ನು ಜವಾಬ್ದಾರಿಯುತವಾಗಿ ನಡೆಸಲಿದ್ದಾರೆ ಎಂದು ಕಥೈಟ್ ಅವರು ಹೇಳಿದ್ದಾರೆ. ಆರೋಪದ ಆಧಾರದಲ್ಲಿ ನಾವು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.







