ಮಲೇಬೆನ್ನೂರು ಪುರಸಭೆ ಚುನಾವಣೆ ಫಲಿತಾಂಶ ಪ್ರಕಟ: ಕಾಂಗ್ರೆಸ್ ಮೇಲುಗೈ

ದಾವಣಗೆರೆ: ಮಲೇಬೆನ್ನೂರು ಪುರಸಭೆಗೆ ಸೋಮವಾರ ನಡೆದಿರುವ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಪಕ್ಷ 12 ಸ್ಥಾನ ಪಡೆದು ಸರಳ ಬಹುಮತದ ಮೂಲಕ ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಮಲೆಬೆನ್ನೂರು ಪುರಸಭೆಯ ಒಟ್ಟು 23 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಕಾಂಗ್ರೆಸ್ 12 ಸ್ಥಾನ, ಬಿಜೆಪಿ 7 ಸ್ಥಾನ, ಜೆಡಿಎಸ್ 3 , ಪಕ್ಷೇತರ 1 ಸ್ಥಾನ ಗಳಿಸಿದೆ. ಈ ಮೂಲಕ ಕಾಂಗ್ರೆಸ್ ಸರಳ ಬಹುಮತ ಪಡೆದಿದೆ.
ಮಲೆಬೆನ್ನೂರಿನ ಶಿಕ್ಷಣಾಧಿಕಾರಿಗಳ ಕಚೇರಿ ಅವರಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ಶಾಂತಯುತವಾಗಿ ನಡೆಯಿತು.
ಹರಿಹರ ನಗರಸಭೆ ಉಪಚುನಾವಣೆ ಫಲಿತಾಂಶ
ಹರಿಹರ ನಗರಸಭೆಯ 21 ನೇ ವಾರ್ಡ್‍ಗೆ ಉಪಚುನಾವಣೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಶಹಝಾದ್ ಸನಾವುಲ್ಲಾ ಅವರು 689 ಮತ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ವಿರುದ್ಧ 114 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ವಿಜಯೋತ್ಸವ
ಮಲೇಬೆನ್ನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಸಾಧಿಸದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಮಾತನಾಡಿದ ಹರಿಹರ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್‍ನಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ, ಅದ್ದರಿಂದ ಜನರು ಕಾಂಗ್ರೆಸ್‍ಗೆ ಮತ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದರು.







