ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪರ ನಿಂತಿದ್ದಾರೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.30: ನಾನು ಅಧ್ಯಕ್ಷನಾದ ಮೇಲೆ ಮಾತ್ರ ಕಾಂಗ್ರೆಸ್ ಚುನಾವಣೆಗಳನ್ನು ಗೆಲ್ಲುತ್ತಿಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲುವುದರ ಹಿಂದೆ ರಾಜ್ಯದ ಜನರ ಅಭಿಪ್ರಾಯ ಅಡಗಿದೆ. ಅದರಲ್ಲೂ ನಗರವಾಸಿಗಳು, ಪಟ್ಟಣವಾಸಿಗಳ ಅಭಿಪ್ರಾಯ ಕಾಂಗ್ರೆಸ್ ಪರ ವಾಲುತ್ತಿದೆ ಎಂಬುದು ಸ್ಪಷ್ಟವಾಗಿದೆ. ಮತದಾರರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಗುರುವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಶಾಸಕರಿರುವ ಕಡೆ ಆಡಳಿತ ಪಕ್ಷಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ. ಬಿಜೆಪಿ ಆಡಳಿತ ಪಕ್ಷವಾಗಿದ್ದರೂ, ಬಿಜೆಪಿ ಶಾಸಕರಿದ್ದರೂ ಜನರು ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತಿದ್ದಾರೆ. ಇದು ರಾಜ್ಯದ ಜನರ ಭಾವನೆ ಯಾವ ರೀತಿ ಇದೆ ಎಂಬುದಕ್ಕೆ ಸಾಕ್ಷಿ ಎಂದರು.
ಇನ್ನೂ ಫಲಿತಾಂಶ ಬರುವುದು ಬಾಕಿ ಇದೆ. ಪೂರ್ಣ ಫಲಿತಾಂಶ ಬಂದ ನಂತರ ಅಂಕಿ-ಅಂಶಗಳ ಸಮೇತ ಮಾತನಾಡುತ್ತೇನೆ. ಇದು ಮುಂಬರುವ ವಿಧಾನಸಭೆ ಚುನಾವಣೆ ದಿಕ್ಸೂಚಿಯೇ ಎಂಬ ಪ್ರಶ್ನೆಗೆ, ‘ಮಾಧ್ಯಮಗಳೇ ಇದನ್ನು ವಿಮರ್ಶೆ ಮಾಡಲಿ. ಆಡಳಿತ ಪಕ್ಷವಿದ್ದರೂ, ಶಾಸಕರು, ಮಂತ್ರಿಗಳ ಕ್ಷೇತ್ರದಲ್ಲಿ ಏನೇನಾಗಿದೆ, ಜನ ಯಾವ ರೀತಿ ತೀರ್ಪು ನೀಡುತ್ತಿದ್ದಾರೆ ಎಂಬುದನ್ನು ನೋಡಿ. ಜನರ ತೀರ್ಪನ್ನು ನಿರ್ಲಕ್ಷಿಸಿ ಸಬೂಬು ಹೇಳಲು ಬಿಜೆಪಿಗೆ ಸಾಧ್ಯವಿಲ್ಲ. ಜನ ನಮ್ಮ ಮೇಲೆ ವಿಶ್ವಾಸ ಇಡುತ್ತಿದ್ದು, ಅವರ ನಿರೀಕ್ಷೆಯಂತೆ ನಡೆಯಬೇಕಾಗುತ್ತದೆ ಎಂದರು.
ಮೇಕೆದಾಟು ಪಾದಯಾತ್ರೆ: ಮೇಕೆದಾಟು ಪಾದಯಾತ್ರೆಗೆ ತಯಾರಿ ಮಾಡುತ್ತಿದ್ದು, ನಿತ್ಯ 1 ಗಂಟೆ ನಡೆಯುತ್ತಿದ್ದೇನೆ. ಕೆಲವರು ಟೋಪಿ ಹಾಕಿದರೆ ಹಾಕಿಸಿಕೊಳ್ಳೋಣ. ಈಗ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡುತ್ತಿದ್ದು, ಅಲ್ಲಿನವರನ್ನು ಆಹ್ವಾನಿಸುತ್ತಿದ್ದೇನೆ. ಎಲ್ಲ ಸಂಘಟನೆಗಳು, ಕಲಾವಿದರು, ಧಾರ್ಮಿಕ ಮುಖಂಡರು ವಿದ್ಯಾರ್ಥಿಗಳು, ಅಪಾರ್ಟ್‍ಮೆಂಟ್ ನಿವಾಸಿಗಳು, ಎಲ್ಲ ವರ್ಗದವರನ್ನೂ ಆಹ್ವಾನಿಸುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಯಾರು ಯಾವ ತಂತ್ರಗಾರಿಕೆ ಮಾಡುತ್ತಿದ್ದಾರೆ, ಯಾರು ದಿಲ್ಲಿಗೆ ಹೋಗಿ ಏನೆಲ್ಲಾ ಮಾಡುತ್ತಿದ್ದಾರೆ, ಏನೆಲ್ಲಾ ಒತ್ತಡ ಹಾಕುತ್ತಿದ್ದಾರೆ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದಲ್ಲಿ ಏನೇನಾಗುತ್ತಿದೆ ಎಂದೆಲ್ಲಾ ನನಗೆ ಗೊತ್ತಿದೆ. ನಾನು ಮುಂಚೆ ಒಬ್ಬರ ವಿರುದ್ಧ ಹೋರಾಡಬೇಕಿತ್ತು, ಈಗ ಇಬ್ಬರ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಇರಲಿ ಮಾಡೋಣ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಕಿಡಿಗಾರಿದರು.
ಡಿ.ಕೆ.ಶಿವಕುಮಾರ್ ರಾಜಕೀಯ ಜೀವನದಲ್ಲಿ ದಳಪತಿಗಳ ವಿಚಾರವಾಗಿ 90ರ ದಶಕ ಮತ್ತೆ ಮರುಕಳಿಸುತ್ತಿದೆಯೇ ಎಂಬ ಪ್ರಶ್ನೆಗೆ, ‘ನನಗೂ ದಳಪತಿಗಳಿಗೂ ಯಾವುದೇ ರೀತಿಯ ರಾಜಕಾರಣ ಇಲ್ಲ. ಕಾಂಗ್ರೆಸಿಗನಾಗಿ ಕಾಂಗ್ರೆಸ್ ವಿರುದ್ಧ ಇರುವ ಎಲ್ಲ ಪಕ್ಷಗಳ ವಿರುದ್ಧ ನಾನು ಹೋರಾಡುತ್ತೇನೆ. ಕೇವಲ ಒಂದು ವರ್ಗ, ಜಾತಿ ವಿರುದ್ಧದ ಮೇಲೆ ನನ್ನ ಹೋರಾಟವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ, ದಳದವರು ತಮ್ಮ ಅನುಕೂಲಕ್ಕಾಗಿ ಟ್ವೀಟ್ ಮಾಡುತ್ತಿದ್ದಾರೆ. ಯೋಜನೆಯ ಡಿಪಿಆರ್‍ನ ದಿನಾಂಕ ಸಮೇತ ದಾಖಲೆಗಳನ್ನು ನೀಡುತ್ತೇನೆ. ನಾನು ಅವರ ರೀತಿ ಮಾತನಾಡುವುದಿಲ್ಲ. ನಾನು ಮಾತನಾಡಿದರೆ ದಾಖಲೆ ಸಮೇತ ಮಾತನಾಡುತ್ತೇನೆ. ಈ ಹೋರಾಟಕ್ಕೆ ಎಲ್ಲರಿಗೂ ಆಹ್ವಾನ ನೀಡುತ್ತೇನೆ. ಪಾದಯಾತ್ರೆ ವಿಚಾರವಾಗಿ ಇಂದು ಹೆಚ್ಚಾಗಿ ಚರ್ಚೆ ಬೇಡ. ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.







