ಡಿ.31ರ ಕರ್ನಾಟಕ ಬಂದ್ ಮುಂದೂಡಲಾಗಿದೆ: ವಾಟಾಳ್ ನಾಗರಾಜ್

ಬೆಂಗಳೂರು, ಡಿ.30: ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ದ್ವೇಷ ಹುಟ್ಟುಹಾಕುತ್ತಿರುವ ಎಂಇಎಸ್ ಸಂಘನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಡಿ.31ರ ಕರ್ನಾಟಕ ಬಂದ್ ಅನ್ನು ಮುಂದೂಡಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರು ಎಂಇಎಸ್ ಸಂಘಟನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.31ರ ಕರ್ನಾಟಕ ಬಂದ್ ಅನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಎಂಇಎಸ್ ನಿಷೇಧಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಅವರಿಗೆ ಯಾವುದೇ ಗಡುವು ನೀಡಿಲ್ಲ. ಆದರೆ, ಎಂಇಎಸ್ ಅನ್ನು ರಾಜ್ಯದಲ್ಲಿ ನಿಷೇಧಿಸಲೇಬೇಕು ಎಂದು ಒತ್ತಾಯಿಸಿದ್ದೇವೆ ಎಂದರು.
ಸಿಎಂ ಅವರು ತಮಗೆ ಬಂದ್‍ಗೆ ಸಂಬಂಧಿಸಿದಂತೆ ಎರಡು ಬಾರಿ ಮನವಿ ಮಾಡಿದ್ದರಿಂದ ಇಂದು ಸಿಎಂ ಗೃಹ ಕಚೇರಿಗೆ ಬಂದಿದ್ದೇನೆ. ಸಿಎಂ ಅವರೂ ಕಾನೂನು ಪ್ರಕಾರ ಎಂಇಎಸ್ ನಿಷೇಧಿಸಲು ಯಾವ ಕ್ರಮಗಳು ಇವೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಬಂದ್ ಕರೆ ಹಿಂದೆ ಪಡೆಯಿರಿ ಎಂದು ಸಿಎಂ ಅವರು ಹೇಳಿದ್ದರಿಂದ ಅವರ ಮಾತಿಗೆ ಗೌರವ ನೀಡಿ, ಬಂದ್ ವಾಪಸ್ ಪಡೆದಿದ್ದೇವೆ ಎಂದರು.
ನನ್ನ ಮೇಲೆ ನಿರಂತರ ಒತ್ತಡ ಇತ್ತು. ಇಂತಹ ಒತ್ತಡ ಎಂದೂ ಆಗಿರಲಿಲ್ಲ. ಒತ್ತಡದಿಂದ ನನಗೆ ಮಾನಸಿಕವಾಗಿ ಬೇಸರವಾಯಿತು. ಕನ್ನಡ ನಾಡು ನುಡಿಗಾಗಿ, ಎಂಇಎಸ್ ನಿಷೇಧಕ್ಕಾಗಿ ನಾವು ಬಂದ್ ಮಾಡಲು ನಿರ್ಧಾರ ಮಾಡಿದ್ದೆವು, ಯಾರ ವಿರುದ್ಧವೂ ಅಲ್ಲ ಎಂದು ವಾಟಾಳ್ ನಾಗರಾಜ್ ತಿಳಿಸಿದರು.
‘ನಾವು ನಿಮ್ಮ ಜೊತೆ ಸದಾ ಇರುತ್ತೇವೆ. ಬಂದ್ ಮಾಡಬೇಡಿ’ ಎಂದು ಮುಖ್ಯಮಂತ್ರಿಗಳು ಪ್ರೀತಿ ಮತ್ತು ಅಭಿಮಾನದಿಂದ ಹೇಳಿದರು. ಬಂದ್ ಮಾಡಿದರೆ ರಾಜ್ಯಕ್ಕೆ ಏನೋ ಅನಾಹುತ ಆಗುತ್ತದೆ, ನಮ್ಮ ಮೇಲೆ ದಬ್ಬಾಳಿಕೆಯ ಮಾತುಗಳೆಲ್ಲ ಬಂದವು. ಯಾರ ಮಾತಿಗೂ ತಲೆ ಕೆಡಿಸಿಕೊಂಡಿರಲಿಲ್ಲ. ಡಿ.30ರ ಬೆಳಗ್ಗೆಯಿಂದಲೂ ನಮ್ಮ ಒಕ್ಕೂಟದವರು ಬಂದ್ ಬೇಡ ಎಂದು ಒತ್ತಡ ತಂದಿದ್ದರು. ಅವರ ಮಾತಿಗೂ ಬೆಲೆ ಕೊಡಬೇಕಾಯಿತು, ಮುಖ್ಯಮಂತ್ರಿಗಳ ಮಾತಿಗೂ ಬೆಲೆ ಕೊಡಬೇಕಾಯಿತು. ಹೀಗಾಗಿ, ಶುಕ್ರವಾರ ನಡೆಯಬೇಕಾದ ಬಂದ್ ನಡೆಯುವುದಿಲ್ಲ ಎಂದು ತಿಳಿಸಿದರು.
ಎಂಇಎಸ್ ನಿಷೇಧದ ಬಗ್ಗೆ ಪರಿಶೀಲಿಸುತ್ತೇವೆ
ವಾಟಾಳ್ ನಾಗರಾಜ್ ಜೊತೆಗೆ ಮಾತನಾಡಿದ್ದೇವೆ. ಕನ್ನಡಪರ ಸಂಘಟನೆಗಳ ನಾಯಕರು ತಮ್ಮ ಅಭಿಪ್ರಾಯ ಈಗಾಗಲೇ ತಿಳಿಸಿದ್ದಾರೆ. ಕನ್ನಡದ ರಕ್ಷಣೆಗಾಗಿ ನಮ್ಮ ಸರಕಾರ ನಿಮ್ಮ ಜೊತೆಗೆ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಹೇಳಿದ್ದೇನೆ. ನನ್ನ ಮನವಿಗೆ ಸ್ಪಂದಿಸಿ, ಬಂದ್ ಕರೆ ಹಿಂಪಡೆದಿರುವ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಎಂಇಎಸ್ ನಿಷೇಧದ ಬಗ್ಗೆ ಕಾನೂನು ಪ್ರಕಾರ ಪರಿಶೀಲಿಸುತ್ತಿದ್ದೇವೆ. ಈ ಹಿಂದೆಯೂ ಈ ಮಾತು ಹೇಳಿದ್ದೆ. ಈಗ ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ.’
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಬೃಹತ್ ರ್‍ಯಾಲಿ
ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ದ್ವೇಷ ಹುಟ್ಟುಹಾಕುತ್ತಿರುವ ಎಂಇಎಸ್ ಸಂಘನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಡಿ.31ರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಟೌನ್‍ಹಾಲ್‍ನಿಂದ ಭಾರೀ ಮೆರವಣಿಗೆ ನಡೆಸುತ್ತೇವೆ ಎಲ್ಲರೂ ಪಾಲ್ಗೊಳ್ಳಬೇಕು.
-ಸಾ.ರಾ.ಗೋವಿಂದು, ಕನ್ನಡ ಪರ ಹೋರಾಟಗಾರ
ಜ.22ಕ್ಕೆ ಕರ್ನಾಟಕ ಬಂದ್
‘ಡಿ.31ರ ಕರ್ನಾಟಕ ಬಂದ್ ಅನ್ನು ಹಿಂಪಡೆಯಲು ನನಗೆ ಮನಸ್ಸೇ ಇರಲಿಲ್ಲ. ಆದರೂ ಬಂದ್ ಅನ್ನು ಹಿಂಪಡೆದಿದ್ದೇವೆ. ಜ.22ಕ್ಕೆ ಕರ್ನಾಟಕ ಬಂದ್ ಮಾಡುತ್ತೇವೆ.’
-ವಾಟಾಳ್ ನಾಗರಾಜ್, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ
ಮುಖ್ಯಮಂತ್ರಿ @BSBommai ಅವರು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಇಂದು ಮಾತುಕತೆ ನಡೆಸಿ, ಡಿಸೆಂಬರ್ 31ರಂದು ಕರೆ ನೀಡಿರುವ ಬಂದ್ ಹಿಂಪಡೆಯುವಂತೆ ಮನವೊಲಿಸಿದರು.
— CM of Karnataka (@CMofKarnataka) December 30, 2021
ಮಾಜಿ ಶಾಸಕ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, ಸಾ.ರಾ. ಗೋವಿಂದ್ ಮತ್ತಿತರರು ಉಪಸ್ಥಿತರಿದ್ದರು. pic.twitter.com/yQmjnHsdkl







