ಬೆಂಗಳೂರು: ಕುಸಿಯುವ ಭೀತಿಯಲ್ಲಿರುವ ಸರಕಾರಿ ಉರ್ದು ಶಾಲೆ ರಕ್ಷಣೆಗೆ ಸಾರ್ವಜನಿಕರ ಆಗ್ರಹ

ಬೆಂಗಳೂರು, ಡಿ.29: ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಸೇರಿದಂತೆ ಇನ್ನಿತರ ಗಣ್ಯರು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದಂತಹ ಲಾಲ್‍ಬಾಗ್ ಕೋಟೆ ರಸ್ತೆಯಲ್ಲಿರುವ ದೊಡ್ಡಮಾವಳ್ಳಿಯ ಮಸ್ಜಿದೆ ಅಬುಲ್ ಖಾಸಿಮ್ ಎದುರು ಇರುವ ಪುರಾತನ ಸರಕಾರಿ ಬಾಲಕರ ಉರ್ದು ಶಾಲೆಯ ಕೊಠಡಿಗಳು ಕುಸಿಯುವ ಹಂತದಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಂದೇ ಕಾಂಪೌಂಡ್ ಒಳಗಡೆ ಸರಕಾರಿ ಕನ್ನಡ ಹಾಗೂ ಉರ್ದು ಶಾಲೆ ನಡೆಯುತ್ತಿದೆ. ಕನ್ನಡ ಶಾಲೆಯ ಕೊಠಡಿಗಳನ್ನು ನವೀಕರಣಗೊಳಿಸಲಾಗಿದೆ. ಆದರೆ, 1930ರಿಂದ ಕಾರ್ಯಾಚರಿಸುತ್ತಿರುವ ಉರ್ದು ಶಾಲೆಗೆ ಸಂಬಂಧಿಸಿದ 8 ಕೊಠಡಿಗಳ ಪೈಕಿ 4 ಕೊಠಡಿಗಳನ್ನು ನೆಲಸಮಗೊಳಿಸಿ ಹೊಸದಾಗಿ 4 ಕೊಠಡಿಗಳನ್ನು ನಿರ್ಮಿಸಲು ಸರಕಾರದಿಂದ 29 ಲಕ್ಷ ರೂ.ಗಳ ಅನುದಾನ ಮಂಜೂರಾಗಿದ್ದರೂ ಸಹ ಈವರೆಗೆ ಅದರ ಉಪಯೋಗವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ವಿಚಾರದ ಕುರಿತು ಈಗಾಗಲೆ ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಬಿಬಿಎಂಪಿ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ. 2019ರ ಫೆ.1ರಂದು ಈ ಉರ್ದು ಬಾಲಕರ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡು ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅವಕಾಶ ನೀಡುವಂತೆ ಕೋರಿ ಮಾವಳ್ಳಿ ಮಾಸ್ಕ್ ಅಸೋಸಿಯೇಷನ್ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ, ಯಾವುದೆ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಮಸೀದಿಯ ಪದಾಧಿಕಾರಿಗಳು ದೂರಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆಯ ನಡುವೆ ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಮಾವಳ್ಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ, ಮಧ್ಯಮ ವರ್ಗದ ಕುಟುಂಬದವರು ವಾಸವಿರುವುದರಿಂದ ಇಲ್ಲಿರುವ ಸರಕಾರಿ ಕನ್ನಡ ಹಾಗೂ ಉರ್ದು ಶಾಲೆಯ ಸಂರಕ್ಷಣೆ ಅಗತ್ಯವಿದೆ ಎಂದು ಮಸೀದಿಯ ಪದಾಧಿಕಾರಿಗಳು, ಸರಕಾರಕ್ಕೆ ಮನವಿ ಮಾಡಿದ್ದಾರೆ.








