ರಾಘವೇಶ್ವರಶ್ರೀ ವಿರುದ್ಧ ಅತ್ಯಾಚಾರ ಪ್ರಕರಣ: ಖುಲಾಸೆ ಪ್ರಶ್ನಿಸಿದ್ದ ಮೇಲ್ಮನವಿ ಹೈಕೋರ್ಟ್‍ನಲ್ಲಿ ವಜಾ

ಬೆಂಗಳೂರು, ಡಿ.30: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿಶ್ರೀ ಅವರನ್ನು ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಿಂದ ದೋಷಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ರಾಜ್ಯ ಸರಕಾರ(ಸಿಐಡಿ) ಹಾಗೂ ಪ್ರಕರಣದ ಸಂತ್ರಸ್ತೆ ರಾಮಕಥಾ ಗಾಯಕಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿತು. ಎರಡೂ ಮೇಲ್ಮನವಿಗಳನ್ನು ವಜಾಗೊಳಿಸಿದೆ.
ತೀರ್ಪಿನಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಸೂಕ್ತ ಕಾರಣ ಇಲ್ಲವೆಂದು ಅಭಿಪ್ರಾಯಪಟ್ಟು ಅರ್ಜಿಗಳನ್ನು ವಜಾಗೊಳಿಸಿದೆ.
ಪ್ರಕರಣವೇನು?: ರಾಮಕಥಾ ಗಾಯಕಿ 2014ರ ಆ.17ರಂದು ದೂರು ಸಲ್ಲಿಸಿ, ರಾಘವೇಶ್ವರ ಸ್ವಾಮೀಜಿ ತನ್ನ ಮೇಲೆ ಹಲವು ವರ್ಷಗಳಿಂದಲೂ ಅತ್ಯಾಚಾರ ಎಸಗಿದ್ದಾರೆ. ಸ್ವಾಮೀಜಿಯಿಂದ ತಾನು ಒಟ್ಟು 169 ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ದೂರು ಸಲ್ಲಿಸಿದ್ದರು.
ದೂರಿನ ತನಿಖೆ ನಡೆಸಿದ್ದ ಸಿಐಡಿ ತನಿಖಾಧಿಕಾರಿಗಳು ಸ್ವಾಮೀಜಿ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ 54ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಕೈಬಿಟ್ಟು 2016ರ ಮಾರ್ಚ್ 31ರಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ರಾಜ್ಯ ಸರಕಾರದ ಪರವಾಗಿ ಸಿಐಡಿ ತನಿಖಾಧಿಕಾರಿಗಳು ಹೈಕೋರ್ಟ್‍ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಸಂತ್ರಸ್ತೆ ಕೂಡ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು.







