ಕೋಟ: ಕೊರಗ ಕಾಲೋನಿಗೆ ಜಯಪ್ರಕಾಶ್ ಹೆಗ್ಡೆ ಭೇಟಿ
‘ಅಮಾಯಕರ ಮೇಲೆ ಕೇಸು ದಾಖಲಿಸಿದ ಬಗ್ಗೆ ಬೇಸರ’

ಕೋಟ, ಡಿ.30: ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮ ನಡೆಯುತಿದ್ದಾಗ ಪೊಲೀಸ್ ಲಾಠಿ ಪ್ರಹಾರ ನಡೆದ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟು ಕೊರಗ ಸಮುದಾಯದ ಕಾಲನಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಇಂದು ಭೇಟಿ ನೀಡಿದರು.
ಸಂತ್ರಸ್ಥ ಕುಟುಂಬದ ಜೊತೆ ಮಾತನಾಡಿದ ಹೆಗ್ಡೆ, ಘಟನೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿ, ಪೊಲೀಸ್ ದೌರ್ಜನ್ಯದ ಕುರಿತಂತೆ ಎಸ್ಪಿ ಹಾಗೂ ಡಿಸಿ ಅವರೊಂದಿಗೆ ಚರ್ಚಿಸಿದ್ದೇನೆ. ದೌರ್ಜನ್ಯ ಎಸಗಿದ ಪಿಎಸ್‌ಐಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಅಮಾಯಕರ ಮೇಲೆ ಕೇಸು ದಾಖಲಿಸಿದ ವಿಷಯ ತಿಳಿದು ನಮಗೂ ಬೇಸರವಾಗಿದೆ. ಈ ಬಗ್ಗೆ ಎಸ್ಪಿ ಹಾಗೂ ಡಿಸಿ ಅವರ ಬಳಿ ಚರ್ಚೆ ಮಾಡಿದ್ದೇನೆ. ನಾಳೆ ಎಸ್ಪಿಯವರು ಇಲ್ಲಿಗೆ ಬರಲಿದ್ದು, ಮುಂದೆ ಏನು ಮಾಡ ಬೇಕೆಂದು ಹೇಳಲಿದ್ದಾರೆ ಎಂದರು.
ಹೆಗ್ಡೆ ಅವರ ಭೇಟಿಯ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಂಗ್ರೆಸ್ ನಾಯಕ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಕೊರಗ ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.





