ಕೂಡಲೇ ದಲಿತರ ಕುಂದುಕೊರತೆ ಸಭೆ ಕರೆಯಿರಿ : ಚಂದ್ರ ಅಲ್ತಾರು
ಉಡುಪಿ, ಡಿ.30: ಕಳೆದ ಎರಡು ವರ್ಷಗಳಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಲಿತರ ಕುಂದುಕೊರತೆ ಸಭೆಯನ್ನು ಕರೆಯದೇ ನಿರ್ಲಕ್ಷ ವಹಿಸುತಿದ್ದು, ಈ ಸಭೆಯನ್ನು ಕೂಡಲೇ ಕರೆದು ದಲಿತರು ಹಾಗೂ ಕೊರಗರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಚರ್ಚಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಉಡುಪಿ ಜಿಲ್ಲಾ ಸಮಿತಿಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು ಒತ್ತಾಯಿಸಿದ್ದಾರೆ.
ಕೋಟತಟ್ಟು ಗ್ರಾಮದಲ್ಲಿ ಕೊರಗರ ಮೆಹಂದಿ ಕಾರ್ಯಕ್ರಮದ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದ ಹಿನ್ನೆಲೆಯಲ್ಲಿ ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು, ಸಭೆ ಕರೆಯಲು ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಕೋಟತಟ್ಟು ಪ್ರಕರಣದಲ್ಲಿ ಪೊಲೀಸರಿಂದ ಏಟು ತಿಂದ ರಾಜೇಶ್, ಗಣೇಶ್ ಬಾರ್ಕೂರು ಹಾಗೂ ಇತರ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ಅವರು ಪ್ರಕರಣವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.





