ಮೈಸೂರು: ರಂಗಾಯಣ ನಿರ್ದೇಶಕರ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ಪೊಲೀಸರಿಂದ ತಡೆ

ಮೈಸೂರು,ಡಿ.29: ರಂಗಾಯಣ ಉಳಿಸುವಂತೆ ಮತ್ತು ಅಲ್ಲಿನ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪನವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ರಂಗಾಯಣ ಉಳಿಸಿ ಹೋರಾಟಗಾರರು ನಡೆಸುತ್ತಿದ್ದ ಪ್ರತಿಭಟನೆಗೆ ಗುರುವಾರ ಪೊಲೀಸರು ಅವಕಾಶ ನೀಡದೆ ತಡೆಯೊಡ್ಡಿ, ಪ್ರತಿಭಟನಾಕಾರರನ್ಮು ಹಿಡಿದು ಎಳೆದಾಡಿದ ಘಟನೆ ನಡೆಯಿತು.
ರಂಗಾಯಣ ಉಳಿಸಿ ಹೋರಾಟಗಾರರು, ಕಳೆದ ಹತ್ತು ದಿನಗಳಿಂದ ರಂಗಾಯಣದ ಗೇಟ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಎಂದಿನಂತೆ ಪ್ರತಿಭಟನೆ ನಡೆಸಲು ರಂಗಾಯಣದ ಗೇಟ್ ಮುಂಭಾಗಕ್ಕೆ ಹೋಗುವ ಮುನ್ನ ಕುಕ್ಕರಹಳ್ಳಿ ಕೆರೆ ಬಳಿಯ ಆಲದ ಮರದ ಬಳಿಯೇ ಪೊಲೀಸರು ತಡೆದರು. ಒಇದರಿಂದ ಕೆರಳಿದ ಪ್ರತಿಭಟನಾಕಾರರು ಪೊಲೀಸರ ನಡೆಗೆ ಧಿಕ್ಕರಿಸಿ ರಂಗಾಯಣದ ಗೇಟ್ ಕಡೆಗೆ ಹೋಗಲು ಮುಂದಾದರು. ಈ ವೇಳೆ ಹಿರಿಯ ಸಮಾಜವಾದಿ ಪ.ಮಲ್ಲೇಶ್, ರಂಗಕರ್ಮಿಗಳಾದ ಬಸವಲಿಂಗಯ್ಯ, ಜನಾರ್ಧನ್ (ಜನ್ನಿ), ಕೃಷ್ಣ ಪ್ರಸಾದ್, ಬಿ.ಕರುಣಾಕರ್, ಉಗ್ರನರಸಿಂಹೇಗೌಡ, ಚಂದ್ರಶೇಖರ ಮೇಟಿ ಪತ್ರಕರ್ತ ಟಿ.ಗುರುರಾಜ್, ಸೇರಿದಂತೆ ಹಲವರನ್ನು ತಡೆದು ಪ.ಮಲ್ಲೇಶ್ ಅವರನ್ನು ಸೇರಿದಂತೆ ಹಲವರನ್ನು ಹಿಡಿದು ಎಳೆದಾಡಿದರು.
ಈ ವೇಳೆ ಹಿರಿಯ ಸಮಾಜವಾದಿ ಪ.ಮಲ್ಲೇಶ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ಮಾತನಾಡಿ, ನಮ್ಮ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ, ನಮಗೆ ರಕ್ಷಣೆಯೂ ಇಲ್ಲ, ನಮ್ಮನ್ನು ಪೊಲೀಸರು ತಡೆದು ಧೌರ್ಜನ್ಯ ಮಾಡುತ್ತಿದ್ದಾರೆ. ಹಾಗಾಗಿ ನೀವು ಕೂಡಲೇ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಪ್ರತಿಭಟನೆಗೆ ಅವಕಾಶ ನೀಡುವಂತೆ ಸೂಚಿಸಬೇಕು ಎಂದು ಹೇಳಿದರು.
ಮತ್ತೆ ಪೊಲೀಸರನ್ನು ಭೇದಿಸಿ ಪ.ಮಲ್ಲೇಶ್ ಮತ್ತು ಜನಾರ್ಧನ್ ರಂಗಾಯಣದತ್ತ ಹೋಗಲು ಮುಂದಾದರು, ಮತ್ತೆ ಪೊಲೀಸರು ತಡೆದು ತಮ್ಮ ಬ್ಯಾರಿಕೇಡ್ ದಾರವನ್ನು ಅಡ್ಡ ಹಿಡಿದರು. ಈ ವೇಳೆ ಪ.ಮಲ್ಲೇಶ್ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ,ಪೊಲೀಸರ ದೌರ್ಜನ್ಯ ನಿಲ್ಲಿಸಿ ಎಂದು ಕೂಗಿದರು.
ಇದಕ್ಕೂ ಮೊದಲು ಪ್ರತಿಭಟನಾಕಾರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸುತ್ತುವರೆದು ರಂಗಾಯಣದ ಗೇಟ್ ಬಳಿಗೆ ಹೋಗಿ ಪ್ರತಿಭಟನೆ ನಡೆಸದಂತೆ ತಡೆದರು. ಇದಕ್ಕೆ ಪ್ರತಿರೋಧವೊಡ್ಡಿದ ಪ್ರತಿಭಟನಾಕಾರರು, ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ನಾವು ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆಯಲ್ಲಿ ರಂಗಾಯಣದ ಗೇಟ್ ಬಳಿಗೆ ಹೋಗಿ ವಾಪಸ್ ಬರುತ್ತೇವೆ ಅವಕಾಶ ಮಾಡಿಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದರು.
ಪರಿಸ್ಥಿತಿ ಕೈಮೀರುವುದನ್ನು ಅರಿತು ಡಿಸಿಪಿ ಪ್ರದೀಪ್ ಗಂಟಿ ಕುದ್ದು ಸ್ಥಳಕ್ಕೆ ಆಗಮಿಸಿ ರಂಗಾಯಣದ ಗೇಟ್ ತನಕ ಪ್ರತಿಭಟನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ಪೊಲೀಸರಿಗೆ ಸೂಚಿಸಿದರು.
ಈ ವೇಳೆ ಎಸಿಪಿ ಶಿವಶಂಕರ್ ಪ್ರತಿಭಟನಾಕಾರರ ಬಳಿ ಬಂದು ದಯಮಾಡಿ ಇಲ್ಲಿಂದ ತೆರಳಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಮಾಡುವಂತೆ ಕೇಳಿಕೊಂಡರು. ಆಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಒಂದು ಹಂತದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ವಾಗ್ಯುದ್ಧವೇ ನಡೆದು ಹೋಯಿತು. ಕೊನೆಗೆ ಪೊಲೀಸರ ವರ್ತನೆಗೆ ಬೇಸತ್ತು ಕ್ರಾಫಡ್ ಹಾಲ್ ಕಡೆಯಿಂದ ಬಾಯಿಗೆ ಕಪ್ಪು ಬಟ್ಟೆ ಧರಿಸಿ ಮೌನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.
ನಂತರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪ್ರತಿಭಟನಾನಿರತರ ಸ್ಥಳಕ್ಕೆ ಆಗಮಿಸಿ ಅವರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರತಿಭಟನೆ ನಿಮ್ಮ ಹಕ್ಕು, ಅದನ್ನು ಹತ್ತಿಕ್ಕುವ ಮನಸ್ಥಿತಿ ನಮಗಿಲ್ಲ, ಆದರೆ ಪ್ರತಿಭಟನೆ ವೇಳೆ ಬೇರೆಯವರು ಬಂದು ಸಂಘರ್ಷ ಉಂಟಾಗಬಾರದು ಎಂದು ನಾವು ರಂಗಾಯಣ ಸ್ಥಳದಲ್ಲಿ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ಆದರೂ ನಿಮ್ಮ ಮನವಿಗೆ ಸ್ಪಂಧಿಸಿ ಪೊಲೀಸ್ ಆಯುಕ್ತರ ಬಳಿ ಮಾತನಾಡಿ ನಿಮಗೆ ಸೂಕ್ತ ಜಾಗ ಒದಗಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹಿರಿಯ ರಂಗಕರ್ಮಿಗಳಾದ ಜನಾರ್ಧನ್ (ಜನ್ನಿ), ಬಸವಲಿಂಗಯ್ಯ, ಕೆ.ಗುಂಡಣ್ಣ, ಶಿವರಾಮ್ ಭಾಟಿಯಾ, ಮೈಮ್ ರಮೇಶ್, ಕೃಷ್ಣಪ್ರಸಾದ್, ಪ.ಮಲ್ಲೇಶ್, ಪತ್ರಕರ್ತ ಟಿ.ಗುರುರಾಜ್, ಉಗ್ರನರಸಿಂಹೇಗೌಡ, ಚಂದ್ರಶೇಖರ ಮೇಟಿ, ಬಿ.ಕರುಣಾಕರ್, ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ ಕನ್ನಡ ಕಾವಲಯ ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ನಾ.ದಿವಾಕಾರ, ಚಂದ್ರಕಲಾ, ಸೀಮಾ, ದಸಂಸ ಮುಖಂಡ ಕಲ್ಲಹಳ್ಳಿ ಕುಮಾರ್, ಪಂಡಿತಾರಾಧ್ಯ, ವಿಶ್ವನಾಥ್, ಸೇರಿದಂತೆ ಹಲವರು ಭಾಗವಹಿಸಿದ್ದರು.
ಬರೀ ಸುಳ್ಳುಗಳನ್ನೇ ಹೇಳಿ ಹೆಂಗ್ ಪುಂಗ್ಲಿ ಎಂದು ಹೇಳೀಕೆ ನೀಡುವ ಚಕ್ರವರ್ತಿ ಸೂಲಿಬೆಲೆಯವರನ್ನು ಬಹುರೂಪಿ ಸಮಾರೋಪಕ್ಕೆ ಕರೆಸಿದರೆ ಅವರು ಬಂದು ಮೌರ್ಯರ ಕಾಲದಿಂದಲೂ ರಂಗಾಯಣ ಇತ್ತು ಈಗ ನೀವೆಲ್ಲ ಬಂದು ಹೊಸದಾಗಿ ಸೃಷ್ಟಿಸಿದ್ದೀರಿ ಎಂಬ ಸುಳ್ಳನ್ನು ಹೇಳಬಹುದು. ಹಾಗಾಗಿ ಅವರನ್ನು ಕರೆಸಬೇಡಿ ಎಂಬುದೇ ನಮ್ಮ ಒತ್ತಾಯ.
-ಕೆ.ಗುಂಡಣ್ಣ.
ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮೌನ ಪ್ರತಿಭಟನೆಗೂ ಅವಕಾಶ ಇಲ್ಲವೇ ಸಾರ್ವಜನಿಕರಿಗೆ ತೊಂದರೆ ಕೊಟ್ಟಿಲ್ಲ. ಕಾನೂನು ಉಲ್ಲಂಘನೆ ಮಾಡಿಲ್ಲ. ಪ್ರತಿಭಟಿಸಲು ಯಾಕೇ ತೊಂದರೆ ಕೊಡುತ್ತೀರಿ.
-ಚೋರನಹಳ್ಳಿ ಶಿವಣ್ಣ, ದಸಂಸ ಜಿಲ್ಲಾ ಸಂಚಾಲಕ.







