ಜಿ.ಪಂ. ಹಾಗೂ ಸಿಇಓಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ವ್ಯವಸ್ಥೆ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಡಿ.30: ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಸಿಇಓಗಳ ಕಾರ್ಯನಿರ್ವಹಣೆಗೆ ಜಿಲ್ಲಾವಾರು ಶ್ರೇಯಾಂಕವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನೋಪಯೋಗಿ ಸರಕಾರ ಆಗಬೇಕಾದರೆ ಜಿಲ್ಲಾ ಪಂಚಾಯಿತಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದು ಅತಿ ಮುಖ್ಯವಾಗಿದೆ. ನಿಮ್ಮ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯಶೈಲಿಯಿಂದ ನಿಮ್ಮದೇ ಛಾಪನ್ನು ಮೂಡಿಸಿ ಎಂದು ಸಲಹೆ ನೀಡಿದರು.
ಅಧಿಕಾರ ಜನರ ಹಿತಕ್ಕೆ ಬಳಸಿ: ಕೆಳಹಂತದಲ್ಲಿ ಯೋಜನೆಗಳ ಅನುಷ್ಠಾನ ಅತಿ ಮುಖ್ಯವಾದುದು. ವಿಕೇಂದ್ರೀಕರಣ ಮೂಲಕ ನಿಮಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ನಿಮ್ಮ ವಿವೇಚನಾಧಿಕಾರವನ್ನು ಜಾಗರೂಕತೆಯಿಂದ ಜನರ ಹಿತಕ್ಕಾಗಿ ಬಳಕೆ ಮಾಡಬೇಕು. ಬಡವರ ಅನುಕೂಲಕ್ಕಾಗಿ ಅಧಿಕಾರಿಗಳು ಕೈಗೊಳ್ಳುವ ತೀರ್ಮಾನಗಳಿಗೆ ಸರಕಾರದ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದರು.
ಅಧಿಕಾರಿಗಳು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕು. ಅನಿಶ್ಚಿತತೆ ‘ಪ್ಲೇಗ್' ಇದ್ದಂತೆ. ವಿಳಂಬ ಧೋರಣೆ ಅತ್ಯಂತ ‘ದುಬಾರಿ'. ಅಧಿಕಾರಿಗಳ ವಿಳಂಬ ಧೋರಣೆ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ ಎಂದ ಬಸವರಾಜ ಬೊಮ್ಮಾಯಿ, ಜನರ ಸುತ್ತ ಅಭಿವೃದ್ಧಿಯಾಗಬೇಕೇ ಹೊರತು ಅಭಿವೃದ್ಧಿ ಸುತ್ತ ಜನರು ಓಡಾಡಬಾರದು ಎಂದು ಸೂಚಿಸಿದರು.
ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಹತ್ತಿರ ಬರುತ್ತಾರೆಂದರೆ ತಳಹಂತದಲ್ಲಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅರ್ಥ. ಆದುದರಿಂದ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸಮಾಡಬೇಕು. ವ್ಯಕ್ತಿಗಳು ವ್ಯವಸ್ಥೆಯನ್ನು ಮುನ್ನಡೆಸಬೇಕು ಎಂದ ಮುಖ್ಯಮಂತ್ರಿ, ತಳಹಂತದ ಅಧಿಕಾರಿ, ಸಿಬ್ಬಂದಿ ಮೇಲೆ ಹತೋಟಿ ಹೊಂದಿರಬೇಕು. ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಬೇಕು. ಹಳ್ಳಿಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ಮುಲಾಜಿಲ್ಲದೆ ಕ್ರಮ: ಅಂತೆಯೇ ಸರಕಾರಕ್ಕೆ ಕಾರ್ಯಕ್ರಮ ಅನುಷ್ಠಾನದಲ್ಲಿರುವ ಕಾನೂನು ಸಮಸ್ಯೆಗಳು, ಎದುರಾಗುವ ತೊಡಕುಗಳ ಬಗ್ಗೆ ವರದಿ ಮಾಡಿ ಸಮಸ್ಯೆ ಬಗೆಹರಿಸಬೇಕೇಂದು ನಿರ್ದೇಶನ ನೀಡಿದರು. ಎಂಜಿನಿಯರಿಂಗ್ ವಿಭಾಗದ ಮೇಲೆ ಹತೋಟಿ ಹೊಂದಿರಬೇಕು. ಎಂಜಿನಿಯರುಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದ ಕುರಿತು ನೀವು ವರದಿ ಸಲ್ಲಿಸಿದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಇಂದಿನ ಸಭೆಯಲ್ಲಿ ನಮ್ಮ ಕಾರ್ಯನಿರ್ವಹಣೆಯ ಕುರಿತು ಆತ್ಮಾವಲೋಕನ ನಡೆಸಿ, ಲೋಪ-ದೋಷಗಳನ್ನು ತಿದ್ದಿಕೊಳ್ಳಬೇಕು. ಜಲ ಜೀವನ್ ಮಿಷನ್, ಉದ್ಯೋಗ ಖಾತರಿ ಯೋಜನೆ ಮತ್ತಿತರ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಕುರಿತು ತೀವ್ರ ನಿಗಾ ವಹಿಸಬೇಕು. ಇವುಗಳ ಕುರಿತ ಪ್ರಗತಿ ಮಾಹಿತಿಯನ್ನು ಪ್ರತ್ಯೇಕವಾಗಿ ನಿರ್ವಹಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ವಿವಿಧ ಯೋಜನೆಗಳಡಿ ಗುತ್ತಿಗೆದಾರರು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು. ಗುಣಮಟ್ಟದ ವಸ್ತುಗಳ ಬಳಕೆ ಹಾಗೂ ಕಾಮಗಾರಿ ಅನುಷ್ಠಾನವನ್ನು ಖಾತರಿಪಡಿಸಿ ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಸಾಕಷ್ಟು ಸಂಖ್ಯೆಯಲ್ಲಿ ಆಗಿದೆ. ಇವುಗಳ ಬಳಕೆಯನ್ನೂ ಜನರು ಮಾಡಿಕೊಳ್ಳುವಂತೆ ಮನವೊಲಿಸಬೇಕು. ಅಂತೆಯೇ ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಈಶ್ವರಪ್ಪ ತಿಳಿಸಿದರು. ಸಭೆಯಲ್ಲಿ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.







