ಮಂಗಳೂರು: ಲೈಟ್ ಹೌಸ್ ಹಿಲ್ ರಸ್ತೆಯ ‘ಪಾರ್ಕಿಂಗ್ ಸ್ಲಾಟ್‘ ತೆರವು
ವಾರ್ತಾಭಾರತಿಯ ವರದಿಯ ಫಲಶ್ರುತಿ

ಮಂಗಳೂರು, ಡಿ.30: ಸಾರ್ವಜನಿಕರ ತೀವ್ರ ವಿರೋಧದ ಮಧ್ಯೆಯೂ ಕೆಲವು ತಿಂಗಳ ಹಿಂದೆ ನಗರದ ಲೈಟ್‌ಹೌಸ್ ಹಿಲ್ ರಸ್ತೆಯ ಒಂದು ಬದಿಯಲ್ಲಿ ನಿರ್ಮಿಸಲಾಗಿದ್ದ ಪಾರ್ಕಿಂಗ್ ಸ್ಲಾಟ್‌ನ್ನು ಗುರುವಾರ ತೆರವುಗೊಳಿಸಲಾಗಿದೆ.
ಮೊದಲೇ ಇಕ್ಕಟ್ಟಾದ ವಾಹನ ಸಂಚಾರ ದಟ್ಟಣೆಯಿರುವ ಈ ರಸ್ತೆಯಲ್ಲಿ ವಾಹನಗಳ (ಕಾರು) ಪಾರ್ಕಿಂಗ್ ಗಾಗಿ ಸ್ಲಾಟ್ ನಿರ್ಮಿಸಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾದ ಈ ಕಾಮಗಾರಿಯ ವಿರುದ್ಧ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದರಲ್ಲೂ ಸಾಮಾಜಿಕ ಹೋರಾಟಗಾರ, ಲೇಖಕ ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ‘ಸ್ಮಾರ್ಟ್ ಸಿಟಿ’ ಯೋಜನೆಯ ಕಾರ್ಯವೈಖರಿಯನ್ನು ‘ವಾರ್ತಾಭಾರತಿ’ಯ ಮೂಲಕ ಪ್ರಶ್ನಿಸಿದ್ದರು. ಪೊಲೀಸ್ ಇಲಾಖೆಯೂ ಅಸಮಾಧಾನ ವ್ಯಕ್ತವಾಗಿತ್ತು. ಆದರೂ ಮನಪಾ ಆಡಳಿತ, ಶಾಸಕರು, ಸಂಸದರು ಇದಕ್ಕೆ ಸ್ಪಂದಿಸಿರಲಿಲ್ಲ.
ಆದರೆ ಸಾರ್ವಜನಿಕ ವಲಯದಿಂದ ವಿರೋಧ ಹೆಚ್ಚಾಗುತ್ತಲೇ ಇದೀಗ ದಿಢೀರ್ ಆಗಿ ಇಲ್ಲಿ ನಿರ್ಮಿಸಲಾದ ಪಾರ್ಕಿಂಗ್ ಸ್ಲಾಟ್‌ನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಈ ಅವೈಜ್ಞಾನಿಕ ಕಾಮಗಾರಿ ಯಿಂದಾದ ನಷ್ಟವನ್ನು ಭರಿಸುವವರು ಯಾರು ? ಸಲಹೆ ನೀಡಿದ ಇಂಜಿನಿಯರ್‌ಗಳ ವಿರುದ್ಧ ಕ್ರಮ ಜರಗಿಸುವವರು ಯಾರು ಎಂದು ಪ್ರಶ್ನಿಸತೊಡಗಿದ್ದಾರೆ.
ವಾಹನಗಳ ಮತ್ತು ಜನಸಾಮಾನ್ಯರ ಸಂಚಾರಕ್ಕೆ ನಗರದ ರಸ್ತೆಗಳನ್ನು ಅಗಲೀಕರಣ ಮಾಡುವ ವೇಳೆ ಐಶಾರಾಮಿ ಕಾರುಗಳ ನಿಲುಗಡೆಗಾಗಿ ಪಾರ್ಕಿಂಗ್ ಸ್ಲಾಟ್ ನಿರ್ಮಿಸಿದ್ದು ಖಂಡನೀಯ. ವಿರೋಧ ವ್ಯಕ್ತವಾದಾಗಲೇ ಇದನ್ನು ನಿಲ್ಲಿಸಿದ್ದರೆ ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿರಲಿಲ್ಲ. ಇದೀಗ ತೆರವುಗೊಳಿಸಿರುವುದು ಶ್ಲಾಘನೀಯ. ಆದರೆ ಕಾಮಗಾರಿಗಾಗಿ ವ್ಯಯಿಸಲಾದ ಲಕ್ಷಾಂತರ ರೂ.ಗೆ ಯಾರು ಹೊಣೆ ? ಎಂದು ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಪ್ರಶ್ನಿಸಿದ್ದಾರೆ.











